ADVERTISEMENT

`ಚುನಾವಣೆಯಿಂದಲೇ ಭ್ರಷ್ಟಾಚಾರ ಆರಂಭ'

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST
ಪ್ರಜಾ ರಾಜಕೀಯ ವೇದಿಕೆ ಮತ್ತು ಸಂಗಮ ಸಂಘಟನೆಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ `ಪ್ರಮಾಣಬದ್ಧ ಚುನಾವಣಾ ಪದ್ಧತಿ-ದಕ್ಷಿಣ ಭಾರತದ ಒಕ್ಕೂಟ' ಉದ್ಘಾಟನಾ ಸಮಾರಂಭದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಸಾಹಿತಿ ಕಮಲಾ ಹಂಪನಾ ಅವರೊಂದಿಗೆ ಸಂವಾದ ನಡೆಸಿದರು. ಚುನಾವಣಾ ಸುಧಾರಣೆಗಾಗಿ ಆಂದೋಲನ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಎಂ.ಸಿ.ರಾಜು ಚಿತ್ರದಲ್ಲಿದ್ದಾರೆ
ಪ್ರಜಾ ರಾಜಕೀಯ ವೇದಿಕೆ ಮತ್ತು ಸಂಗಮ ಸಂಘಟನೆಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ `ಪ್ರಮಾಣಬದ್ಧ ಚುನಾವಣಾ ಪದ್ಧತಿ-ದಕ್ಷಿಣ ಭಾರತದ ಒಕ್ಕೂಟ' ಉದ್ಘಾಟನಾ ಸಮಾರಂಭದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಸಾಹಿತಿ ಕಮಲಾ ಹಂಪನಾ ಅವರೊಂದಿಗೆ ಸಂವಾದ ನಡೆಸಿದರು. ಚುನಾವಣಾ ಸುಧಾರಣೆಗಾಗಿ ಆಂದೋಲನ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಎಂ.ಸಿ.ರಾಜು ಚಿತ್ರದಲ್ಲಿದ್ದಾರೆ   

ಬೆಂಗಳೂರು: `ಚುನಾವಣೆಯು ಇಂದು ಉದ್ಯಮವಾಗಿದೆ. ಮತವನ್ನು ಮಾರಿಕೊಳ್ಳುವ ಪ್ರಜೆ ಮತ್ತು ಮತವನ್ನು ಖರೀದಿಸುವ ಜನ ಪ್ರತಿನಿಧಿಗಳಿಂದ ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರಗೊಂಡಿದೆ' ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾ ರಾಜಕೀಯ ವೇದಿಕೆ ಮತ್ತು ಸಂಗಮ ಸಂಘಟನೆಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ `ಪ್ರಮಾಣಬದ್ಧ ಚುನಾವಣಾ ಪದ್ಧತಿ-ದಕ್ಷಿಣ ಭಾರತದ ಒಕ್ಕೂಟ' ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಚುನಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ಚುನಾವಣೆಯಲ್ಲಿ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ನಂತರ ಕೋಟಿಗಟ್ಟಲೆ ಹಣವನ್ನು ಪಡೆಯುವ ಉದ್ಯಮವಾಗಿ ರಾಜಕಾರಣ ಮಾರ್ಪಟ್ಟಿದೆ' ಎಂದರು.

`ರಾಜ್ಯವನ್ನು ಐದು ವರ್ಷಗಳ ಕಾಲ ಲೂಟಿ ಮಾಡಲು ಪರವಾನಗಿ ನೀಡಿದಂತೆ ಅಧಿಕಾರಕ್ಕೆ ಬಂದ ಪಕ್ಷಗಳು ವರ್ತಿಸುತ್ತವೆ. ಜನಪರ ಕಾಳಜಿಯಿಲ್ಲದೆ, ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಯತ್ನಿಸುತ್ತವೆ' ಎಂದು ಹೇಳಿದರು.


`ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ನಿಯಂತ್ರಿಸಲು ಮೊದಲು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಈಗಿನ ವ್ಯವಸ್ಥೆಯಂತೆ, ಬಹುಮತ ಗಳಿಸಿದ ಪಕ್ಷ ಅಥವಾ ವ್ಯಕ್ತಿ ಅಧಿಕಾರಕ್ಕೆ ಬರುತ್ತಾನೆ. ಒಂದು ಮತ ಹೆಚ್ಚಿಗೆ ಪಡೆದ ವ್ಯಕ್ತಿಯೇ ವಿಜೇತನಾಗುತ್ತಾನೆ. ಆದರೆ, ಈ ವ್ಯವಸ್ಥೆಯಿಂದ ನಾಡಿನ ಎಲ್ಲ ಪ್ರಜೆಗಳ ಅಭಿಪ್ರಾಯವನ್ನು ಪುರಸ್ಕರಿಸಿದಂತೆ ಆಗುವುದಿಲ್ಲ. ಈ ವ್ಯವಸ್ಥೆಯೇ ಸೂಕ್ತವಾಗಿಲ್ಲ' ಎಂದರು.

`ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷಗಳ ಶೇಕಡಾವಾರು ಪ್ರಮಾಣವನ್ನು ಪರಿಗಣಿಸಿ ಎಲ್ಲ ಪಕ್ಷಗಳಿಂದಲೂ ಶಾಸಕರನ್ನು ಆಯ್ಕೆ ಮಾಡಿ ಆಡಳಿತದಲ್ಲಿ ಭಾಗಿಯಾಗುವ ಅವಕಾಶವನ್ನು ಕಲ್ಪಿಸಬೇಕು. ಆಗ, ದೇಶದ ಎಲ್ಲ ಪ್ರಜೆಗಳ ಮನೋಭಿಲಾಷೆಗೆ ಬೆಲೆ ನೀಡಿದಂತಾಗುತ್ತದೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಾಯಕವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

`ಚುನಾವಣೆಯ ಹೊಣೆಯನ್ನು ಚುನಾವಣಾ ಆಯೋಗವೇ ಸಂಪೂರ್ಣವಾಗಿ ನಿರ್ವಹಿಸಬೇಕು. ಚುನಾವಣೆ ವೇಳೆಯಲ್ಲಿ ನಡೆಯುವ ಮೆರವಣಿಗೆ, ಪ್ರಚಾರ, ಬ್ಯಾನರ್ ಕಟ್ಟುವುದು, ಮನೆ ಮನೆಯ ಪ್ರಚಾರವನ್ನು ನಿರ್ಬಂಧಿಸಬೇಕು. ಆಯೋಗವೇ ಮಾಧ್ಯಮಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೂರ್ವಾಪರಗಳನ್ನು ತಿಳಿಸಬೇಕು. ಆಗ ಮಾತ್ರ, ಪಾರದರ್ಶಕವಾದ ಚುನಾವಣೆ ಮತ್ತು ದೇಶದ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

`ಎಲ್ಲ ಸಮುದಾಯಗಳಲ್ಲಿಯೂ ಬಡವರು ಮತ್ತು ಅವಕಾಶವಂಚಿತರಿದ್ದಾರೆ. ಅವರಿಗಾಗಿ ಸರ್ಕಾರ ಏನು ಮಾಡಿದರೂ ಕಡಿಮೆಯೇ. ಆದರೆ, ಸರ್ಕಾರ ನೀಡಿರುವ ಸೌಲಭ್ಯ ಮತ್ತು ಯೋಜನೆಗಳು ದುರುಪಯೋಗವಾಗದಂತೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅನುಷ್ಠಾನಕ್ಕೆ ತರಬೇಕು' ಎಂದು ಒತ್ತಾಯಿಸಿದರು.

`ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಪರಾಧ ಹಿನ್ನೆಲೆಯಿರುವ ಶಾಸಕರು ಮತ್ತು ಜನಪ್ರತಿನಿಧಿಗಳ ಕುರಿತು ನೀಡಿರುವ ತೀರ್ಪು ರಾಜಕೀಯದಲ್ಲಿನ ಅಪರಾಧಿಕರಣವನ್ನು ಶುದ್ಧಗೊಳಿಸುತ್ತದೆ ಎಂಬ ವಿಶ್ವಾಸವಿದೆ. ಸಮಾಜ ಮತ್ತು ವ್ಯವಸ್ಥೆಯು ಜಡವಾದಾಗ ನ್ಯಾಯಾಂಗ ಕ್ರಿಯಾಶೀಲವಾಗಬೇಕು. ನ್ಯಾಯಾಂಗವು ಹೆಚ್ಚು ಸಕಾರಾತ್ಮಕವಾಗಿ ಕ್ರಿಯಾಶೀಲವಾಗಲು ಸಕಾಲವಾಗಿದೆ' ಎಂದರು.

ಸಾಹಿತಿ ಕಮಲಾ ಹಂಪನಾ ಮಾತನಾಡಿ, `ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸುವ ಅಗತ್ಯವಿದೆ. ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಇಂದು ಅನಿವಾರ್ಯವಾಗಿದೆ' ಎಂದು ಹೇಳಿದರು.

ಸಿ.ಎಂ ದ್ವಿತೀಯ ಶ್ರೇಣಿಯಲ್ಲಿ ಪಾಸ್!
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ನಲ್ಲಿ ದ್ವಿತೀಯ ಶ್ರೇಣಿ ಗಳಿಸಿದ್ದಾರೆ. ಮುಂದಿನ ಬಾರಿ ಅವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ ಎಂಬ ವಿಶ್ವಾಸವಿದೆ. ಜನಪರ ಬಜೆಟ್.

ADVERTISEMENT

ಆದರೆ, ಮುಂದಿನ ಬಾರಿ ಬಜೆಟ್ ಮಂಡಿಸುವ ಮುನ್ನ ಸಿದ್ದರಾಮಯ್ಯನವರು ಬಜೆಟ್‌ನ ಸೂಚ್ಯ ಅಂಶಗಳನ್ನು ಮೂರು ತಿಂಗಳು ಮೊದಲೇ ಬಿಡುಗಡೆಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು. ವಿವಿಧ ಕ್ಷೇತ್ರದ ತಜ್ಞರ ಜತೆಗೆ ಸಮಾಲೋಚನೆ ನಡೆಸಿ ನಂತರ ಬಜೆಟ್ ಮಂಡಿಸಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.
-ನಿಡುಮಾಮಿಡಿ ಮಠದ ವೀರಭದ್ರ. ಚನ್ನಮಲ್ಲ ಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.