ADVERTISEMENT

ಜನಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:45 IST
Last Updated 28 ಫೆಬ್ರುವರಿ 2011, 19:45 IST

ಬೆಂಗಳೂರು: ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸದಂತೆ ಒತ್ತಾಯಿಸಿ ವಿವಿಧ ಜನಪರ ಸಂಘಟನೆಗಳ ಸದಸ್ಯರು ನಗರದ ಜೆಡಿಎಸ್ ಕಚೇರಿಯಿಂದ ರೇಸ್‌ಕೋರ್ಸ್ ರಸ್ತೆವರೆಗೆ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಸಿಪಿಎಂ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತಿತರ ಸಂಘಟನೆಗಳ ಸದಸ್ಯರು ಕುಡಿಯುವ ನೀರಿನ ವ್ಯಾಪಾರದ ವಿಷಯವಾಗಿ ಚರ್ಚಿಸಲು ಬಂದಿರುವ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳ ನಿಯೋಗದೊಂದಿಗೆ ಸರ್ಕಾರ ಮಾತುಕತೆ ನಡೆಸಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಆರ್.ಕೃಷ್ಣಪ್ಪ, ‘ಕುಡಿಯುವ ನೀರಿಲ್ಲದೇ ಜನರು ಈಗಾಗಲೇ ಪರದಾಡುತ್ತಿದ್ದಾರೆ. ನೀರಿನ ಸರಬರಾಜನ್ನು ಖಾಸಗೀಕರಣಗೊಳಿಸುವುದರಿಂದ ಕಂಪೆನಿಗಳ ಹಿಡಿತಕ್ಕೆ ಸಿಲುಕಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಅಮೆರಿಕದ ಎರಡು ಕಂಪೆನಿಗಳು ನೀರಿನ ವ್ಯಾಪಾರದಲ್ಲಿ ಏಕಸ್ವಾಮ್ಯ ಸಾಧಿಸಿವೆ’ ಎಂದು ದೂರಿದರು.

‘ಮುಂಬೈ ಹಾಗೂ ಬೆಂಗಳೂರು ನಗರಗಳು ಕೋಟ್ಯಂತರ ರೂಪಾಯಿ ನೀರಿನ ಮಾರುಕಟ್ಟೆಯನ್ನು ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅಮೆರಿಕದ ಕಂಪೆನಿಗಳು ಆ ಮಾರುಕಟ್ಟೆಗಳನ್ನು ಕಬಳಿಸುವ ಉದ್ದೇಶ ಹೊಂದಿವೆ. ಇದಕ್ಕೆ ಅವಕಾಶ ನೀಡಬಾರದು. ಈಗಾಗಲೇ ಹಿಂದುಳಿದ ಪ್ರದೇಶಗಳಲ್ಲಿ ನೀರನ್ನು ಮಾರಾಟ ಮಾಡಲಾಗುತ್ತಿದ್ದು, ಆತಂಕಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದರು.

ಕುಡಿಯುವ ನೀರು ಸರಬರಾಜು, ಒಳಚರಂಡಿ, ಕೊಳಚೆ ನೀರು ನಿರ್ವಹಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಯನ್ನು ವಿದೇಶಿ ಕಂಪೆನಗಳಿಗೆ ನೀಡಿದರೆ, ದೇಶವನ್ನು ಒತ್ತೆಯಿಟ್ಟಂತಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಜೆಡಿಎಸ್ ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಪ್ರಸನ್ನಕುಮಾರ್, ಸಿಪಿಐ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ವಿ.ಲೋಕೇಶ್, ಟಿಪ್ಪುಸುಲ್ತಾನ್ ಸಂಯುಕ್ತರಂಗದ ಅಧ್ಯಕ್ಷ ಸರ್ದಾರ್ ಅಹಮ್ಮದ್ ಖುರೇಷಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಬೇಡಿಕೆ ವಿಷಯವಾಗಿ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ಸದಸ್ಯರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.