ADVERTISEMENT

ಜನರ ಕಷ್ಟಕ್ಕೆ ಮಿಡಿಯಿರಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ದೇಶದಲ್ಲಿ ಶೇ 78 ಮಂದಿ 40 ವರ್ಷದೊಳಗಿನ ಪ್ರಾಯ­ದವರು. ಯುವಜನತೆ ದೇಶದ ದೊಡ್ಡ ಶಕ್ತಿ. ಯೋಗ್ಯತಾವಂತರು, ಶೀಲ­ವಂತರು ಹಾಗೂ ಕಷ್ಟದಲ್ಲಿರುವ ಜನರಿಗಾಗಿ ಅನುಕಂಪ ತೋರುವ ಯುವಜನರು ಬೇಕಿದೆ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ ಹೇಳಿದರು.

ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ವತಿಯಿಂದ ಬಸವನಗುಡಿ ನ್ಯಾಷನಲ್‌ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಭಾರತಕ್ಕಾಗಿ ಓಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸಂಖ್ಯೆ ದೇಶದ ಸಂಪತ್ತು. ಫಲವತ್ತಾದ ಭೂಮಿ ಇದೆ. ನದಿಗಳು ಇವೆ. ಬುದ್ಧಿವಂತ ಜನರೂ ಇದ್ದಾರೆ. ಆದರೆ, ದೇಶ ನಿರೀಕ್ಷಿತ ಪ್ರಗತಿ ಸಾಧಿ­ಸಿಲ್ಲ. ಮಾದರಿ ರಾಷ್ಟ್ರ ನಿರ್ಮಾಣಕ್ಕೆ ವಿವೇಕಾನಂದರ ಸಂದೇಶ ಹಾಗೂ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ­ಕೊಳ್ಳಬೇಕು’ ಎಂದು ಹೇಳಿದರು.

ಆರೆಸ್ಸೆಸ್‌ ಪ್ರಮುಖ ಬಾಗಯ್ಯ ಮಾತನಾಡಿ, ‘ದೇಶದಲ್ಲಿ ಹಲವು ಶತಮಾನ­ಗಳಿಂದ ಅಜ್ಞಾನ ತಾಂಡವ­ವಾಗುತ್ತಿದೆ. ಬಡವರ ಹಾಗೂ ಹಿಂದು­ಳಿ­ದವರ ಶೋಷಣೆ ನಡೆಯುತ್ತಿದೆ. ಮಹಿಳೆಯನ್ನು ಗೌರವದಿಂದ ಕಾಣು­ತ್ತಿಲ್ಲ. ಜನರ ಮೇಲಿನ ಶೋಷಣೆ ನೋಡಿ­ದಾಗ ನಮ್ಮ ಮನಸ್ಸು ಜ್ವಾಲಾ­ಮುಖಿಯಾಗುತ್ತದೆ ಎಂದು ವಿವೇಕಾ­ನಂದರು ಹೇಳಿದ್ದರು. ಈ ನಿಟ್ಟಿನಲ್ಲಿ ಶೋಷಣೆಮುಕ್ತ ಸಮಾಜ ನಿರ್ಮಾಣ ಆಗಬೇಕಿದೆ’ ಎಂದರು.

‘ಸ್ವಾತಂತ್ರ್ಯಪೂರ್ವದಲ್ಲಿ ಈ ದೇಶದ ಬುದ್ಧಿ­ಜೀವಿಗಳು ಬೌದ್ಧಿಕ ಗುಲಾಮ­ಗಿರಿಗೆ ಒಳಗಾಗಿದ್ದರು. ಇಂತಹ ಸಂದರ್ಭ­ದಲ್ಲಿ ವಿವೇಕಾನಂದ ಅವರು ಷಿಕಾಗೋದಲ್ಲಿ ಸನಾತನ ಧರ್ಮದ ಶ್ರೇಷ್ಠತೆಯನ್ನು ಸಾರಿದರು. ಭಾರತ ಕಲ್ಯಾಣವಾದರೆ ವಿಶ್ವ ಕಲ್ಯಾಣವಾಗು­ತ್ತದೆ ಎಂದು ಆಶಿಸಿದ್ದರು. ಯುವ­ಜನರು ವಿವೇಕಾನಂದರ ಆದರ್ಶ­ಗಳನ್ನು ಅಳವಡಿಸಿಕೊಳ್ಳಬೇಕು. ವಿಲಾಸಿ ಜೀವ­ನಕ್ಕೆ ಕೊನೆ ಹಾಡಬೇಕು’ ಎಂದರು.

ರಾಜ್ಯಸಭಾ ಸದಸ್ಯ ನ್ಯಾ. ರಾಮಾ ಜೋಯಿಸ್‌, ಅದಮ್ಯ ಚೇತನ ಟ್ರಸ್ಟಿನ ತೇಜಸ್ವಿನಿ ಅನಂತಕುಮಾರ್‌, ದೂರದ­ರ್ಶ­ನದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್‌  ಜೋಷಿ, ನಿರ್ದೇಶಕ ಟಿ.­ಎಸ್‌.­ನಾಗಾಭರಣ, ಸಮಾಜಸೇವಕಿ ಸುಶೀಲಮ್ಮ, ಸಂಸ್ಕಾರ ಭಾರತಿ ಉಪಾ­ಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಸಮಿತಿಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕೃಷ್ಣರಾವ್‌ ಉದ್ಯಾನದ ಹತ್ತಿರದಿಂದ, ಕೋಟೆ ಪ್ರೌಢಶಾಲೆ ಮೈದಾನದಿಂದ ಹಾಗೂ ರಾಮಕೃಷ್ಣ ಮಠ ವೃತ್ತದಿಂದ ಮೈದಾ­ನದ ವರೆಗೆ ನಡಿಗೆ ಆಯೋಜಿಸ­ಲಾಗಿತ್ತು. ಸಂಸದರಾದ ಅನಂತ ಕುಮಾರ್‌, ಪಿ.ಸಿ. ಮೋಹನ್‌ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.