ADVERTISEMENT

ಜಯಲಲಿತಾ ಅಕ್ರಮ ಆಸ್ತಿ ವಿವಾದ: ಶಶಿಕಲಾ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ವಿವಾದದಲ್ಲಿ ಸಿಲುಕಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ ಬಾರಿ ಐದು ದಿನಗಳಲ್ಲಿ 1,339 ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೆ, ಅವರ ಆಪ್ತ ಸ್ನೇಹಿತೆಯಾಗಿದ್ದ ವಿ.ಕೆ.ಶಶಿಕಲಾ ಗುರುವಾರ ನೀಡಿದ್ದು ಕೇವಲ 23 ಉತ್ತರ!

ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲೇ ಬರೆದು ತಂದಿದ್ದರೂ ಐದು ಗಂಟೆಗಳಲ್ಲಿ ಅವರು 23 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಶಕ್ತರಾದರು. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಎರಡನೆಯ ಆರೋಪಿ. ಈ ಹಿನ್ನೆಲೆಯಲ್ಲಿ ಗುರುವಾರ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಅವರ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಯಿತು.

ಇವರಿಗೆ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳನ್ನು ಅವರ ಪರ ವಕೀಲರು ತಮಿಳಿನಲ್ಲಿ ತರ್ಜುಮೆ ಮಾಡಿ, ಆ ಪ್ರಶ್ನೆಗಳಿಗೆ ಅವರು ಉತ್ತರ ಹುಡುಕಿ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆ ನಿಧಾನಗತಿಯಲ್ಲಿ ಸಾಗಿತು.

ಇದನ್ನು ಗಮನಿಸಿದ ಸಹಾಯಕ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೇಶ ಚೌಟ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಧೀಶ ಬಿ.ವಿ.ಮಲ್ಲಿಕಾರ್ಜುನ ಅವರನ್ನು ಉದ್ದೇಶಿಸಿ ಚೌಟ ಅವರು, `ಹೀಗೇ ಮುಂದುವರಿದರೆ ಇವರ ಸಾಕ್ಷ್ಯಗಳನ್ನು ದಾಖಲು ಮಾಡಿಕೊಳ್ಳಲು ಕನಿಷ್ಠ 40 ದಿನಗಳು ಬೇಕಾಗುತ್ತವೆ. ಮೊದಲನೆಯ ಆರೋಪಿ (ಜಯಲಲಿತಾ) ತ್ವರಿತವಾಗಿ ಉತ್ತರಿಸಿದ್ದಾರೆ. ಆದರೆ ಇದು ಬಹಳ ಕಷ್ಟ~ ಎಂದರು.

ತಾವು ಬರೆದುಕೊಂಡು ಬಂದಿರುವ ಟಿಪ್ಪಣಿಯಿಂದ ಶಶಿಕಲಾ ಅವರು ಎಲ್ಲ ಉತ್ತರಗಳನ್ನು ನೋಡಿ ಹೇಳಿದ ಬಗ್ಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ ಅವರು ಕೂಡ ಬೆಳಿಗ್ಗೆ ವಿಚಾರಣೆ ಆರಂಭವಾದಾಗಲೇ ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆ ಮುಂದೂಡಲಾಯಿತು.

ಎಸ್‌ಟಿಎಫ್: ಮೇಲ್ಮನವಿ ವಜಾ
ವೀರಪ್ಪನ್ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಸ್‌ಟಿಎಫ್ ಸಿಬ್ಬಂದಿಗೆ ಹಣದ ಬದಲು ನಿವೇಶನ ನೀಡುವಂತೆ ಕೋರಿ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇವರಿಗೆ ನಿವೇಶನ ನೀಡುವುದಾಗಿ ಸರ್ಕಾರ ಈ ಹಿಂದೆ ವಾಗ್ದಾನ ಮಾಡಿತ್ತು. ನಂತರ ನಿವೇಶನ ಕಡಿಮೆ ಇದೆ ಎಂದಿದ್ದ ಸರ್ಕಾರ, ಹಣ ನೀಡುವುದಾಗಿ ಸೂಚಿಸಿತ್ತು.

ಇದನ್ನು ಹಲವು ಸಿಬ್ಬಂದಿ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು. ಅಲ್ಲಿ ಅವರ ಅರ್ಜಿ ವಜಾಗೊಂಡಿತ್ತು. ಅದನ್ನು ಪ್ರಶ್ನಿಸಿ ಈಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.


ಸೊಸೆಯಿಂದ ಕೊಲೆ: ತನಿಖೆ ಕೋರಿ ಅರ್ಜಿ
ತಮ್ಮ ಮಗನ ಕೊಲೆಯನ್ನು ಆತನ ಪತ್ನಿಯೇ ಮಾಡಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕೋರಿ ತಂದೆಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಟಿ.ದಾಸರಹಳ್ಳಿ ನಿವಾಸಿ, ಆಭರಣ ವ್ಯಾಪಾರಿ ಪಿ.ಆರ್.ಸೋಲಂಕಿ ಈ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸೊಸೆ ಎಂ. ದಿವ್ಯಾ ಹಣದ ಆಸೆಗೆ ಪುತ್ರ ಪಾರಸ್‌ಕುಮಾರ್ (33 ವರ್ಷ) ಕೊಲೆ ಮಾಡಿದ್ದಾಳೆ. ಆದರೆ ಮಗ ಹೃದಯಾಘಾತದಿಂದ ಸತ್ತಿರುವುದಾಗಿ ಸುಳ್ಳು ಮಾಹಿತಿ ನೀಡುತ್ತಿದ್ದಾಳೆ. ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎನ್ನುವುದು ಅವರ ಆರೋಪ.

`ಇಬ್ಬರೂ ಪರಸ್ಪರ ಪ್ರೀತಿಸಿ ನನ್ನ ಗಮನಕ್ಕೆ ಬಾರದೇ ವಿವಾಹವಾಗಿದ್ದಾರೆ. ಮನೆಯಿಂದ ಆಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದ. ಇದರ ಆಸೆಗೆ ಆಕೆ ಕೊಲೆ ಮಾಡಿದ್ದಾಳೆ.  ಮಗನ ಮರಣೋತ್ತರ ಪರೀಕ್ಷೆಯನ್ನು ಮಾಡಲು ಕೂಡ ಆಕೆ ಬಿಟ್ಟಿಲ್ಲ~ ಎನ್ನುವುದು ಅವರ ವಾದ. ಈ ಕುರಿತು ಅರ್ಜಿದಾರರ ಪರ ವಕೀಲ ಸಿ.ಎನ್.ರಾಜು ಅವರಿಂದ ಹೆಚ್ಚಿನ ಮಾಹಿತಿ ಬಯಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT