ADVERTISEMENT

ಜಲಮಂಡಳಿ ಅಧ್ಯಕ್ಷ ತುಷಾರ್, ಎಫ್‌ಎಸ್‌ಎಲ್‌ ತಜ್ಞನಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:34 IST
Last Updated 14 ಏಪ್ರಿಲ್ 2018, 19:34 IST
ಫಣೀಂದ್ರ, ತುಷಾರ್ ಗಿರಿನಾಥ್
ಫಣೀಂದ್ರ, ತುಷಾರ್ ಗಿರಿನಾಥ್   

ಬೆಂಗಳೂರು: ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಫಣೀಂದ್ರ ಅವರಿಗೆ ಅಪರಿಚಿತರಿಬ್ಬರು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಈ ಸಂಬಂಧ ಹಲಸೂರು ಗೇಟ್‌ ಹಾಗೂ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬೆದರಿಕೆವೊಡ್ಡಿರುವ ವ್ಯಕ್ತಿಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

‘ತುಷಾರ್‌ ಅವರಿಗೆ ಬಂದಿರುವ ಕೊಲೆ ಬೆದರಿಕೆ ಬಗ್ಗೆ, ಕಚೇರಿಯ ಅಧಿಕಾರಿ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ಹಲಸೂರು ಗೇಟ್‌ ಪೊಲೀಸರು ತಿಳಿಸಿದರು.

ADVERTISEMENT

‘ನಾನು ಕೊಟ್ಟಿರುವ ಬಿಲ್‌ಗಳನ್ನು ಮೂರು ತಿಂಗಳೊಳಗೆ ಮಂಜೂರು ಮಾಡಬೇಕು. ಇಲ್ಲದಿದ್ದರೆ ತುಷಾರ್‌ ಗಿರಿನಾಥ್‌ ಅವರನ್ನು ಕೊಲೆ ಮಾಡುತ್ತೇನೆ’ ಎಂದು ವ್ಯಕ್ತಿಯೊಬ್ಬ ಪತ್ರ ಬರೆದಿರುವುದಾಗಿ ಅಧಿಕಾರಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಕಚೇರಿಗೆ ಬಂದಿರುವ ಪತ್ರವನ್ನು ಸುಪರ್ದಿಗೆ ಪಡೆದು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.

ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ: ಫಣೀಂದ್ರ ಅವರ ಮೊಬೈಲ್‌ ವಾಟ್ಸ್‌ಆ್ಯಪ್‌ಗೆ ಅರೇಬಿಕ್ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಬೆದರಿಕೆ ಸಂದೇಶ ಬಂದಿದೆ.

‘ಬೆದರಿಕೆ ಸಂಬಂದ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಾಗಿತ್ತು. ನಂತರ, ನ್ಯಾಯಾಲಯ ನೀಡಿದ ಸೂಚನೆ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ಸೈಬರ್‌ ಪೊಲೀಸರು ತಿಳಿಸಿದರು. 

‘ಪ್ರಜಾವಾಣಿ’ ಜತೆ ಮಾತನಾಡಿದ ಫಣೀಂದ್ರ, ‘ತಲೆ ಕತ್ತರಿಸುತ್ತಿರುವ ವಿಡಿಯೊಗಳನ್ನೂ ಅಪರಿಚಿತರು ಕಳುಹಿಸುತ್ತಿದ್ದಾರೆ. ನನ್ನನ್ನು ಏಕೆ ಕೊಲೆ ಮಾಡುತ್ತೀರಾ? ಕಾರಣ ಏನು? ಎಂದು ವಾಪಸ್‌ ಸಂದೇಶ ಕಳುಹಿಸಿದ್ದೆ. ಅದಕ್ಕೆ ಉತ್ತರ ಬಂದಿಲ್ಲ. ಹಲವು ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಪರೀಕ್ಷಿಸಿ ವರದಿ ನೀಡಿದ್ದೇನೆ. ಈಗ ಏಕಾಏಕಿ ಬೆದರಿಕೆ ಬರುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.