ADVERTISEMENT

ಜಾತಿಗೆ ಒತ್ತು: ವಿಳಂಬಕ್ಕೆ ಕಾರಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಬೆಂಗಳೂರು: `ರಾಜ್ಯ ಸರ್ಕಾರವು ಲೋಕಾಯುಕ್ತ ಹುದ್ದೆ ನೇಮಕಾತಿ ವಿಚಾರದಲ್ಲಿ ನಿರ್ದಿಷ್ಟ ಜಾತಿ ಮತ್ತು ವರ್ಗಗಳಿಗೆ ಒತ್ತು ನೀಡದೇ ಇದ್ದಿದ್ದರೆ, ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ನೇಮಿಸಲು ಸಾಧ್ಯವಾಗುತ್ತಿತ್ತು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ಸಂತ ಜೋಸೆಫರ ಸಂಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಡಿಪ್ಲೊಮಾ ಪದವಿ ಕೋರ್ಸ್‌ಗಳ ಪ್ರಮಾಣ ಪತ್ರ ಪ್ರದಾನ ಮಾಡಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

`ಲೋಕಾಯುಕ್ತ ಹುದ್ದೆಗೆ ರಾಜ್ಯದಲ್ಲಿ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಅಭ್ಯರ್ಥಿಯೇ ಇಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರ್ಕಾರ ಗಂಭೀರ ನಿಲುವನ್ನು ತಳೆದಿಲ್ಲ ಎಂಬುದು ಸ್ಪಷ್ಟಗೊಂಡಿದೆ~ ಎಂದರು.

`ದೇಶವು ಪ್ರಜಾಪ್ರಭುತ್ವದಂತಹ ಉತ್ತಮ ರಾಜಕೀಯ ಪದ್ದತಿಯನ್ನು ಹೊಂದಿದೆ. ಆದರೆ ಇದರಲ್ಲಿ ಸಾಕಷ್ಟು ಸುಧಾರಣೆಯನ್ನು ತರುವ ಅಗತ್ಯವಿದೆ. ಭ್ರಷ್ಟರು ಮತ್ತು ಭ್ರಷ್ಟತೆಗೆ ಕಡಿವಾಣ ಹಾಕಲು ಭ್ರಷ್ಟರನ್ನು ಸಾಮಾಜಿಕವಾಗಿ ಬಹಿಷ್ಕರಿಸಿ~ ಎಂದು ಕರೆ ನೀಡಿದರು.

`ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನನ್ನ ಅಚ್ಚುಮೆಚ್ಚಿನ ಮತ್ತು ಪ್ರಾಮಾಣಿಕ ಪ್ರಧಾನ ಮಂತ್ರಿ. ಭ್ರಷ್ಟಾಚಾರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೇವಲ ರಾಜಕೀಯೇತರ ಯುವ ನೇತಾರರಿಗೆ ಕರೆ ನೀಡುತ್ತೇನೆಯೇ ಹೊರತು ವ್ಯವಸ್ಥೆ ಸುಧಾರಣೆಯ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇತರೆ ಯುವ ರಾಜಕಾರಣಿಗಳಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ~ ಎಂದು ಹೇಳಿದರು.

`ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಹಕ್ಕುಗಳ ನಡುವೆ ಸಂಬಂಧವಿದೆ. ಭ್ರಷ್ಟಾಚಾರವು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯ ಮತ್ತೊಂದು ಆಯಾಮ.ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಲೋಕಪಾಲ್ ಮಸೂದೆ ಒಂದು ಒಳ್ಳೆಯ ಆಯುಧ. ಇದನ್ನು ಸಮರ್ಪಕವಾಗಿ ಜಾರಿಗೊಳಿಸುವ ಅನಿವಾರ್ಯತೆಯಿದೆ~ ಎಂದರು.
`ಎಲ್ಲಾ  ಕ್ಷೇತ್ರಗಳಲ್ಲೂ ಮಾನವ ಹಕ್ಕು ಉಲ್ಲಂಘನೆಯಾಗುತ್ತಿವೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.