ADVERTISEMENT

'ಜಾಮೀನು ದಂಧೆ; ಮಾಜಿ ಶಿಕ್ಷಕ ಸೆರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:06 IST
Last Updated 19 ಜನವರಿ 2019, 19:06 IST

ಬೆಂಗಳೂರು: ನಕಲಿ ದಾಖಲೆಗಳನ್ನು ಸಲ್ಲಿಸಿ 25ಕ್ಕೂ ಹೆಚ್ಚು ಆರೋಪಿಗಳಿಗೆ ಜಾಮೀನು ಕೊಡಿಸಿದ್ದ ಮಾಜಿ ಶಿಕ್ಷಕ ಸುರೇಶ್ ಬಾಬು (39) ಬಸವೇಶ್ವರನಗರ ಪೊಲೀಸರ ಅತಿಥಿಯಾಗಿದ್ದಾನೆ.

ಜೆ.ಸಿ.ನಗರದ ಪೈಪ್‌ಲೈನ್ ರಸ್ತೆಯ ನಿವಾಸಿಯಾದ ಶಿವಕುಮಾರ್ ಎಂಬಾತ, ಬಸವೇಶ್ವರನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಎಚ್‌.ಪಿ ಪೆಟ್ರೋಲ್ ಬಂಕ್‌ನಲ್ಲಿ ಜ.3ರ ರಾತ್ರಿ ಮಹಿಳೆ ಜತೆ ಜಗಳವಾಡಿದ್ದ. ಈ ವೇಳೆ ಅವರ ಹೊಟ್ಟೆಗೆ ಒದ್ದು ಪರಾರಿಯಾಗಿದ್ದ. ಆ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡ ಶಿವಕುಮಾರ್, ಜ.18ರಂದು ತಮ್ಮ ವಕೀಲರೊಂದಿಗೆ ಠಾಣೆಗೆ ಹಾಜರಾಗಿದ್ದ. ಆಗ ಪೊಲೀಸರು ಜಾಮೀನುದಾರರನ್ನು ಕರೆದುಕೊಂಡು ಬರುವಂತೆ ಅವರಿಗೆ ಸೂಚಿಸಿದ್ದರು.

ADVERTISEMENT

ಸ್ವಲ್ಪ ಸಮಯದ ನಂತರ ಠಾಣೆಗೆ ಬಂದ ಸುರೇಶ್ ಬಾಬು, ‘ನಾನು ಗೌರಿಬಿದನೂರು ಶಾಲೆಯ ಶಿಕ್ಷಕ. ನನ್ನ ಸ್ನೇಹಿತನಾದ ಶಿವಕುಮಾರ್‌ಗೆ ಜಾಮೀನು ಕೊಡಲು ಬಂದಿದ್ದೇನೆ’ ಎಂದು ಶಿಕ್ಷಣ ಇಲಾಖೆಯ ಗುರುತಿನ ಚೀಟಿ, ವೇತನ ಚೀಟಿಗಳನ್ನು ಸಲ್ಲಿಸಿದ್ದ. ಅವುಗಳನ್ನು ನೋಡಿ ಅನುಮಾನಗೊಂಡ ಪೊಲೀಸರು, ತಮ್ಮ ಶಾಲೆಯ ಮುಖ್ಯ ಶಿಕ್ಷಕರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಕೊಡುವಂತೆ ಕೇಳಿದ್ದರು.

ಇದರಿಂದ ವಿಚಲಿತಗೊಂಡ ಆತ, ‘ನಾನು ವರ್ಷದ ಹಿಂದೆ ಶಿಕ್ಷಕನಾಗಿದ್ದೆ. ಸಂಬಳ ಸಾಕಾಗದ ಕಾರಣ ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುವ ದಂಧೆ ಪ್ರಾರಂಭಿಸಿದೆ. ಮೊದಲು ಗೌರಿಬಿದನೂರಿನ ‘ಶಿವಶಕ್ತಿ ಟ್ರೇಡರ್ಸ್‌’ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಕಲಿ ಸೀಲನ್ನು ಪಡೆದುಕೊಂಡೆ. ನಂತರ ಪುಸ್ತಕ ಮಳಿಗೆಗಳಲ್ಲಿ ವೇತನ ಚೀಟಿ ಪಡೆದು, ಅದಕ್ಕೆ ನಾನೇ ಕ್ಷೇತ್ರ ಶಿಕ್ಷಣಾಧಿಕಾರಿಯ ಸಹಿ ಮಾಡುತ್ತಿದ್ದೆ. ಬಳಿಕ ಆ ದಾಖಲೆಗಳನ್ನೇ ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಶಿವಕುಮಾರ್‌ ಜೈಲುಪಾಲು

‘ಜಾಮೀನು ಕೊಡಿಸಲು ಒಬ್ಬರಿಗೆ ₹ 3 ಸಾವಿರದಿಂದ ₹5 ಸಾವಿರ ಶುಲ್ಕ ಪಡೆಯುತ್ತಿದೆ. ಹೆಬ್ಬಾಳ ಸೇರಿದಂತೆ ಇತರೆ ಠಾಣೆಗಳಲ್ಲಿ ಇದುವರಿಗೆ 25ಕ್ಕೂ ಹೆಚ್ಚು ಮಂದಿಗೆ ಜಾಮೀನು ಕೊಡಿಸಿದ್ದೇನೆ’ ಎಂದು ಸುರೇಶ್‌ ಬಾಬು ಹೇಳಿಕೆ ಕೊಟ್ಟಿದ್ದಾನೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಶಿವಕುಮಾರ್‌ನನ್ನು 2ನೇ ಆರೋಪಿಯನ್ನಾಗಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಬಸವೇಶ್ವರನಗರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.