ADVERTISEMENT

ಜಾರ್ಜ್ ಪರ ಎಸ್.ಎಂ. ಕೃಷ್ಣ ಪ್ರಚಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:58 IST
Last Updated 22 ಏಪ್ರಿಲ್ 2013, 19:58 IST

ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ.ಜಾರ್ಜ್ ಪರ ಮತ ಯಾಚಿಸಿದರು.

ಬಾಣಸವಾಡಿಯ ಮಕ್ಕುಂಟಮ್ಮ ದೇವಸ್ಥಾನದ ಬಳಿಯಿಂದ ಬೆಳಗ್ಗೆ 11ಗಂಟೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ `ರೋಡ್ ಶೋ' ಆರಂಭಿಸಿದ ಕೃಷ್ಣ, ಬಾಣಸವಾಡಿ ಮುಖ್ಯರಸ್ತೆಯಿಂದ ಹೊರಟು, ಗುಳ್ಳಪ್ಪ ಸರ್ಕಲ್, ಕಮ್ಮನಹಳ್ಳಿ ಮುಖ್ಯರಸ್ತೆ, ಜಾನಕಿರಾಮ ಲೇಔಟ್, ಲಿಂಗರಾಜಪುರ ಮಾರ್ಗವಾಗಿ ಕಾಚರಕನಹಳ್ಳಿವರೆಗೂ ಸಾಗಿದರು.

ಚುನಾವಣಾ ಪ್ರಚಾರ ಪ್ರಾರಂಭಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನನ್ನ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷ ನನಗೆ ಉತ್ತಮ ಸ್ಥಾನಮಾನ ನೀಡಿದೆ. ಪಕ್ಷದ ಗೆಲುವಿಗಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್‌ನ ಋಣ ತೀರಿಸುತ್ತೇನೆ' ಎಂದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಕೆ.ಜೆ.ಜಾರ್ಜ್ ಅವರು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ಅವರಿಗೆ ಜಯ ತಂದುಕೊಡಲಿವೆ ಎಂದು ಅಭಿಪ್ರಾಯಪಟ್ಟರು.

ಜಾರ್ಜ್ ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಬೆಂಗಳೂರು ಐ.ಟಿ ಉದ್ಯಮದಲ್ಲಿ ಮೊದಲನೇ ಸ್ಥಾನದಲ್ಲಿತ್ತು. ಆದರೆ ಈಗ ಆ ಸ್ಥಾನಕ್ಕೆ ದೆಹಲಿ ಬಂದಿದೆ. ಅಲ್ಲದೆ ರಾಜ್ಯ ಎಲ್ಲಾ ರೀತಿಯಲ್ಲೂ ಹಿಂದುಳಿದಿದೆ  ಎಂದರು.

ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಹೂಡಿಕೆಯಾಗಿ ಕೈಗಾರಿಕೆಗಳು ಪ್ರಾರಂಭವಾಗಬೇಕು. ಅವುಗಳಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರಾಜ್ಯವನ್ನು ಆರ್ಥಿಕವಾಗಿ ಸಬಲಗೊಳಿಸಬೇಕು. ಇವೆಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಚಾರದ ವೇಳೆ ಸುಮಾರು ಒಂದು ಗಂಟೆ ಕಾಲ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.