ADVERTISEMENT

ಜಿ.ಆರ್.ವಿಶ್ವನಾಥ್ ಅಂಡರ್‌ಪಾಸ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:55 IST
Last Updated 18 ಜನವರಿ 2011, 19:55 IST

ಬೆಂಗಳೂರು: ನಗರದ ಜೆ.ಪಿ.ನಗರ 24ನೇ ಮುಖ್ಯರಸ್ತೆ ಮತ್ತು 15ನೇ ಅಡ್ಡರಸ್ತೆ ಕೂಡುವ ಜಂಕ್ಷನ್‌ನಲ್ಲಿ ಬಿಬಿಎಂಪಿ ನೂತನವಾಗಿ ನಿರ್ಮಿಸಿರುವ ‘ಜಿ.ಆರ್.ವಿಶ್ವನಾಥ್ ಅಂಡರ್‌ಪಾಸ್’ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಜಿ.ಆರ್.ವಿಶ್ವನಾಥ್ ದೇಶ ಕಂಡ ಅತ್ಯುತ್ತಮ ಕ್ರೀಡಾಪಟು. ನೂರು ವರ್ಷ ಕಳೆದರೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ವಿಶ್ವನಾಥ್ ಅವರ ನೆನಪು ಸದಾ ಇರುತ್ತದೆ. ನೂತನ ಅಂಡರ್‌ಪಾಸ್‌ಗೆ ಅವರ ಹೆಸರನ್ನಿಟ್ಟಿರುವುದು ಸೂಕ್ತವಾಗಿದೆ’ ಎಂದು ಹೇಳಿದರು.

‘ಬಿಬಿಎಂಪಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳು ಹಾಗೂ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳ್ಳದ ಕಾಮಗಾರಿಗಳನ್ನು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದರು. ಮೇಯರ್ ಎಸ್.ಕೆ.ನಟರಾಜ್ ಮಾತನಾಡಿ, ‘ಜೆ.ಪಿ.ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅಂಡರ್‌ಪಾಸ್‌ಗೆ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರ ಹೆಸರನ್ನಿಡಬೇಕೆಂಬ ಸ್ಥಳೀಯರ ಬಯಕೆ ಈಡೇರಿದೆ. ಈ ಅಂಡರ್‌ಪಾಸ್ ನಿರ್ಮಾಣಕ್ಕೆ 23 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಕನಕಪುರ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆ ನಡುವಿನ ಸಂಚಾರ ಸುಗಮವಾಗಲಿದೆ’ ಎಂದರು.

ಫೆಬ್ರುವರಿಯಲ್ಲಿ ಕಾಮಗಾರಿಗೆ ಚಾಲನೆ: ‘ಪ್ರಸಕ್ತ ಆಯವ್ಯಯದಲ್ಲಿ ಪ್ರಕಟಿಸಿರುವಂತೆ ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿ ಒಂದೇ ಹಂತದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಫೆಬ್ರುವರಿ ಮೊದಲ ವಾರದಲ್ಲಿ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುವುದು’ ಎಂದರು.

‘ಇದರಿಂದ ಏಕಕಾಲಕ್ಕೆ ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ. ಅಲ್ಲದೇ ಮೇಯರ್ ಹಾಗೂ ಉಪ ಮೇಯರ್ ನಿಧಿಯಿಂದ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸುವ ಮೂಲಕ ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳನ್ನು ಸದ್ಯದಲ್ಲೇ ಪಾಲಿಕೆ ಸಭೆಗೆ ಆಹ್ವಾನಿಸಲಾಗುವುದು’ ಎಂದು ಹೇಳಿದರು.

ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್, ‘ಇದೊಂದು ಸ್ಮರಣೀಯ ಸಂದರ್ಭ. ಜನರು ನನ್ನನ್ನು ಮರೆತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಬಿಬಿಎಂಪಿ ನನ್ನ ಸಾಧನೆಯನ್ನು ಪರಿಗಣಿಸಿ ಇಲ್ಲಿನ ಅಂಡರ್‌ಪಾಸ್‌ಗೆ ನನ್ನ ಹೆಸರನ್ನಿಟ್ಟಿರುವುದು ಸಂತಸ ತಂದಿದೆ’ ಎಂದು ಭಾವುಕರಾಗಿ ನುಡಿದರು.

‘ಸುಮಾರು 30 ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ನಾನು ಚಿಕ್ಕಂದಿನಲ್ಲಿ ರಸ್ತೆಯಲ್ಲೇ ಕ್ರಿಕೆಟ್ ಆಡುತ್ತಿದ್ದೆ. ಆದರೆ ಇಂದು ಮನೆಯ ಬಳಿ ಆಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹೊಸದಾಗಿ ಸ್ಥಾಪನೆಯಾಗುವ ಶಾಲೆಗಳು ಕಡ್ಡಾಯವಾಗಿ ಮೈದಾನ ಹೊಂದಿರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. ಶಾಸಕ ಬಿ.ಎನ್.ವಿಜಯಕುಮಾರ್ ಮಾತನಾಡಿ, ‘ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಜಯನಗರ 4ನೇ ಬ್ಲಾಕ್‌ನಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಕ್ರಿಕೆಟಿಗ ರಾಹುಲ್ ದ್ರಾವಿಡ್, ಸಚಿವರಾದ ಆರ್.ಅಶೋಕ, ಬಸವರಾಜ ಬೊಮ್ಮಾಯಿ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಎಂ.ಸತೀಶ್‌ರೆಡ್ಡಿ, ಉಪ ಮೇಯರ್ ಎನ್.ದಯಾನಂದ್, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಎಸ್.ಸತ್ಯನಾರಾಯಣ, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ರವೀಂದ್ರ, ಆಯುಕ್ತ ಸಿದ್ದಯ್ಯ, ಪಾಲಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.