ADVERTISEMENT

ಜುಲೈ ಮೊದಲ ವಾರ ವಿಧಾನಮಂಡಲ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಬೆಂಗಳೂರು: ಪಕ್ಷದ ಯಾವುದೇ ಮುಖಂಡರು ನಡೆಸುವ ಚಹಾಕೂಟ, ಉಪಾಹಾರ ಕೂಟಗಳ ಕುರಿತು ತಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಜನತಾದರ್ಶನ ನಡೆಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಹಾಕೂಟ ಆಯೋಜಿಸಿರುವ ಕುರಿತು ಪ್ರಶ್ನಿಸಿದಾಗ, `ಇಂತಹ ಚಹಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ. ಅದರಿಂದ ನನಗೆ ಯಾವುದೇ ತೊಂದರೆಯೂ ಇಲ್ಲ~ ಎಂದರು.

ಕೆಲವು ಸಚಿವರು ಭಾನುವಾರ ನಾಗ್ಪುರಕ್ಕೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗಡ್ಕರಿ ಅವರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಚಿವರು ಶುಭಾಶಯ ಕೋರಲು ಅಲ್ಲಿಗೆ ತೆರಳಿದ್ದರು. ಈ ಭೇಟಿಗೆ ಯಾವುದೇ ರಾಜಕೀಯ ಮಹತ್ವ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಯಡಿಯೂರಪ್ಪ ಅವರು ಚಹಾಕೂಟದ ಹೆಸರಿನಲ್ಲಿ ಶಾಸಕರಿಗೆ ಆಹ್ವಾನ ನೀಡಿರುವ ಕುರಿತು ಪ್ರಶ್ನಿಸಿದಾಗ, `ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ~ ಎಂದರು.

ಜುಲೈನಲ್ಲಿ ಅಧಿವೇಶನ: ಜುಲೈ ಮೊದಲ ವಾರ ವಿಧಾನ ಮಂಡಲ ಅಧಿವೇಶನ ನಡೆಸಲಾಗುವುದು. ಅಧಿವೇಶನದ ದಿನಾಂಕ ನಿಗದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ವಿಧಾನ ಪರಿಷತ್‌ನ ಚುನಾವಣೆ ಪೂರ್ಣಗೊಂಡ ಬಳಿಕ ಸಂಪುಟ ವಿಸ್ತರಣೆ ನಡೆಸಲಾಗುವುದು ಎಂದು ಹೇಳಿದರು.

ಬೃಂದಾ ಭೇಟಿ: ಸೋಮವಾರ ಬೆಳಿಗ್ಗೆ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಮಾಡಿದ ಸಿಪಿಎಂ ನಾಯಕಿ ಬೃಂದಾ ಕಾರಟ್, ನಕ್ಸಲೀಯರ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಮತ್ತು ಅವರ ತಂದೆಯ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಬೃಂದಾ, `ವಿಠಲ ಮತ್ತು ಅವರ ತಂದೆಯ ಬಂಧನದಲ್ಲಿ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಅಮಾಯಕರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸದಾನಂದ ಗೌಡ ಅವರನ್ನು ಒತ್ತಾಯಿಸಿದ್ದೇನೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.