ADVERTISEMENT

ಜೆಡಿಎಸ್‌ ಮುಗಿಸಲು ಸಂಚು

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಬೆಂಗಳೂರು: ‘ಈಗಿನ ಕೆಟ್ಟ ರಾಜಕಾರಣದಲ್ಲಿ ನಮ್ಮನ್ನು ಗುರುತಿಸಲು ಯಾರೂ ತಯಾರಿಲ್ಲ. ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅಳಲು ತೋಡಿಕೊಂಡರು.

ನಗರದ ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಬೆಂಗಳೂರು ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಆರ್‌. ರತನ್‌ಸಿಂಗ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್‌ ಮತ್ತು ಬಿಜೆಪಿ ಬಿಟ್ಟು ಬೇರೆ ಪಕ್ಷಗಳು ಬೇಕಾಗಿಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಸಲಾಗುತ್ತಿದೆ.

ಮಾಧ್ಯಮಗಳಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ಮಾತ್ರ ಬಿಂಬಿಸಲಾಗುತ್ತಿದೆ. ಒಂದು ಕಡೆ ನರೇಂದ್ರ ಮೋದಿ, ಇನ್ನೊಂದೆಡೆ ರಾಹುಲ್‌ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಪ್ರಚಾರ ನಡೆಯುತ್ತಿದೆ. ನಮ್ಮಂತಹ ರಾಜಕೀಯ ಪಕ್ಷ ಗುರುತಿಸುವವರು ಇಲ್ಲ. ಆದ್ದರಿಂದ, ಪಕ್ಷದ ಅಳಿವು–ಉಳಿವು ಕಾರ್ಯಕರ್ತರು ನಿರ್ವಹಿಸುವ ಜವಾಬ್ದಾರಿ ಮೇಲೆ ಅವಲಂಬಿತವಾಗಿದೆ’ ಎಂದು ನುಡಿದರು.

‘ಸಿದ್ದರಾಮಯ್ಯ ಅವರನ್ನು ಗುರುತಿಸಿ ಕಾರ್ಯ ಕರ್ತರು ಬೆಳೆಸಿದರು. ಜೆಡಿಎಸ್‌ನಲ್ಲಿ ವ್ಯಕ್ತಿತ್ವ ನಿರ್ಮಿಸಿ ಕೊಂಡು ಕಾಂಗ್ರೆಸ್‌ಗೆ ಹೋದರು. ಸಿದ್ದರಾಮಯ್ಯ ಅವರ ಬಗ್ಗೆ ನಾನು ಇದುವರೆಗೆ ಲಘುವಾಗಿ ಮಾತನಾಡಿಲ್ಲ. ಅವರು ಏನೇ ಮಾತನಾಡಿರಬಹುದು. ನನ್ನ ಮನಸ್ಸಿಗೆ ನೋವಾಗಿದ್ದರೂ ಟೀಕೆ ಮಾಡಿಲ್ಲ. ರಾಜಕೀಯದಲ್ಲಿ ಶತ್ರುಗಳು, ಮಿತ್ರರು ಶಾಶ್ವತ ಅಲ್ಲ. ಆದರೆ, ಯಾವುದೇ ಕಾರಣಕ್ಕೂ ಸೇಡಿನ ರಾಜಕೀಯ ಮಾಡಬಾರದು’ ಎಂದು ನುಡಿದರು.

‘ಎ. ಕೃಷ್ಣಪ್ಪ ಅವರ ಶಕ್ತಿ ಗುರುತಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬೇರೆ ಪಕ್ಷದಿಂದ ಬಂದ ತಕ್ಷಣವೇ ಅಧ್ಯಕ್ಷರನ್ನಾಗಿ ಮಾಡ ಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸುವುದು ಸರಿ ಅಲ್ಲ. ಕೆಲಸ ಮಾಡುವವರ ಹೃದಯ ಚೆನ್ನಾಗಿರಬೇಕು. ಯಾವುದೋ ಒಂದು ಜಾತಿಗಾಗಿ ಈ ಪಕ್ಷ ಸೀಮಿತವಾಗಿಲ್ಲ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪಕ್ಷ ಸಂಘಟಿಸುತ್ತೇವೆ’ ಎಂದರು.

ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಮಾತನಾಡಿ, ಬೆಂಗಳೂರು ನಗರದಲ್ಲಿ ಜೆಡಿಎಸ್‌ ತುಕ್ಕು ಹಿಡಿದಿದೆ. ನಗರದಲ್ಲಿ ಪಕ್ಷವನ್ನು ಸಂಘಟಿಸಬೇಕು. ಶಿಸ್ತು ಮತ್ತು ಸಮರ್ಪಣಾ ಮನೋಭಾವದಿಂದ ಪಕ್ಷ ಸಂಘಟನೆ ಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್‌. ನಾರಾಯಣರಾವ್‌, ರಾಜ್ಯ ಮಹಾಪ್ರಧಾನ ಕಾರ್ಯ ದರ್ಶಿ ಅಬ್ದುಲ್‌ ಅಜೀಂ, ವಕ್ತಾರ ರಮೇಶ್‌ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT