ಬೆಂಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂಬ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಜೆಪಿ ಅಭ್ಯರ್ಥಿ ಸುನೀಲ್‌ಕುಮಾರ್ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಹಿಂದಿನಿಂದಲೂ ನಂಟಿದೆ. ಈಗಲೂ ಅದು ಮುಂದುವರಿದಿದ್ದು, ಚುನಾವಣೆಯಲ್ಲಿ ರಹಸ್ಯವಾಗಿ ಕೈಜೋಡಿಸಿಕೊಂಡಿದ್ದಾರೆ~ ಎಂದು ದೂರಿದರು.
`ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುನೀಲ್‌ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಕೆಂಗೇರಿ ಹೋಬಳಿಯ ವಳಗೆರೆಹಳ್ಳಿಯ ಸರ್ವೆ ನಂಬರ್ 80/1 ಮತ್ತು 80/2ರಲ್ಲಿ ಹೇಮರಾಜು, ಗಂಗಾಧರ, ನಾರಾಯಣಸ್ವಾಮಿ ಮತ್ತಿತರರಿಗೆ ಸೇರಿದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕುಮಾರಸ್ವಾಮಿ ಅವರಿಗೆ ಸುನೀಲ್‌ಕುಮಾರ್ ಪತ್ರ ಬರೆದಿದ್ದರು.
ಕುಮಾರಸ್ವಾಮಿ ಅವರು ಕಾನೂನು ಉಲ್ಲಂಘಿಸಿ ಈ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು~ ಎಂದು ಆರೋಪಿಸಿದ ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.