ADVERTISEMENT

ಜೆ.ಪಿ ಉದ್ಯಾನದಲ್ಲಿ ಅತ್ಯಾಚಾರಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:42 IST
Last Updated 26 ಫೆಬ್ರುವರಿ 2018, 19:42 IST

ಬೆಂಗಳೂರು: ಮತ್ತೀಕೆರೆ ಸಮೀಪದ ಜೆ.ಪಿ.ಪಾರ್ಕ್‌ನಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದ್ದು, ಆ ಸಂಬಂಧ ಬೇಲೂರಿನ ಶ್ಯಾಮ್ ಅಲಿಯಾಸ್ ಶಂಭು ಮರಿಯಪ್ಪಗೌಡರ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ನಿವಾಸಿಯಾದ 31 ವರ್ಷದ ಮಹಿಳೆಯು ಫೆ. 21ರಂದು ಬೆಳಿಗ್ಗೆ 11.30 ಗಂಟೆಗೆ ವಾಯು ವಿಹಾರಕ್ಕೆಂದು ಉದ್ಯಾನಕ್ಕೆ ಬಂದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಆರೋಪಿ, ಪಕ್ಕದ ಪೊದೆಯೊಳಗೆ ಎಳೆದುಕೊಂಡು ಹೋಗಿದ್ದ. ನೆಲದ ಮೇಲೆ ಕೆಡವಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದರು.

ಆರೋಪಿಯು ಏಕಾಏಕಿ ಕೈ ಹಿಡಿದಿದ್ದರಿಂದ ಮಹಿಳೆಯು ಚೀರಾಡಲು ಆರಂಭಿಸಿದ್ದರು. ಅವರ ಬಾಯಿ ಮುಚ್ಚಿದ್ದ ಆರೋಪಿಯು ಕೃತ್ಯ ಎಸಗಿದ್ದ. ಅದಾದ ಬಳಿಕ ಅವಾಚ್ಯ ಶಬ್ದಗಳಿಂದ ಮಹಿಳೆಯನ್ನು ನಿಂದಿಸಿ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೀವಂತ ಬಿಡುವುದಿಲ್ಲ
ವೆಂದು ಬೆದರಿಕೆ ಸಹ ಹಾಕಿದ್ದ ಎಂದರು.

ADVERTISEMENT

ಕೃತ್ಯದ ವೇಳೆಯೇ ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದ. ಅವಾಗಲೇ ಮಹಿಳೆಯು ಆರೋಪಿಯ ಕೈ ಕಚ್ಚಿ ಸಹಾಯಕ್ಕಾಗಿ ಕೂಗಾಡಿದ್ದರು. ಆತ ತಪ್ಪಿಸಿಕೊಂಡು ಓಡಲಾರಂಭಿಸಿದ್ದ. ಆತನನ್ನು ಸ್ಥಳೀಯರೇ ಬೆನ್ನಟ್ಟಿ ಹಿಡಿದು ನಮಗೆ ಒಪ್ಪಿಸಿ
ದ್ದಾರೆ ಎಂದು ಪೊಲೀಸರು ತಿಳಿಸಿದರು.

‘ತಾನು ಕೆಎಸ್‌ಆರ್‌ಟಿಸಿ ಚಾಲಕ ಎಂದು ಆರೋಪಿಯು ಹೇಳಿಕೊಂಡಿದ್ದ. ಆತ ಸದ್ಯ ಜಾಮೀನು ಮೇಲೆ ಬಿಡುಗಡೆ ಆಗಿದ್ದಾನೆ’ ಎಂದು ಮಾಹಿತಿ ನೀಡಿದರು.

ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ, ‘ಪತಿ ತೀರಿಕೊಂಡಿದ್ದಾರೆ. ನಿತ್ಯವೂ ವಾಯು ವಿಹಾರಕ್ಕೆಂದು ಉದ್ಯಾನಕ್ಕೆ ಹೋಗುತ್ತೇನೆ. ಆರೋಪಿಯ ಗುರುತು ನನಗಿಲ್ಲ. ಇದೇ ಮೊದಲ ಬಾರಿಗೆ ಆತನನ್ನು ನೋಡಿದ್ದು’ ಎಂದಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯದಿಂದ ಘಟನೆ: ‘85 ಎಕರೆ ಪ್ರದೇಶದಲ್ಲಿ ಉದ್ಯಾನವಿದ್ದು, ಇದನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತದೆ. ಎಲ್ಲಿಯೂ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಭದ್ರತಾ ಸಿಬ್ಬಂದಿಗಳ ಸಂಖ್ಯೆಯು ಕಡಿಮೆ ಇದೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ’ ಎಂದು ಸ್ಥಳೀಯರು ದೂರಿದರು.

‘ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ವಾಯುವಿಹಾರಕ್ಕೆಂದು ಉದ್ಯಾನಕ್ಕೆ ಬರುತ್ತಾರೆ. ಅವರಲ್ಲಿ ಮಹಿಳೆಯರ ಸಂಖ್ಯೆಯು ಹೆಚ್ಚಿರುತ್ತದೆ. ಹೀಗಾಗಿ ಉದ್ಯಾನದಲ್ಲಿ ಸೂಕ್ತ ಭದ್ರತೆ ಕೈಗೊಳ್ಳಬೇಕು. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.