ADVERTISEMENT

`ಜೈನ ಸಾಹಿತ್ಯ ಅಧ್ಯಯನದಿಂದ ಕನ್ನಡ ನುಡಿಗೆ ಹೆಚ್ಚಿನ ಲಾಭ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:49 IST
Last Updated 24 ಡಿಸೆಂಬರ್ 2012, 19:49 IST

ಬೆಂಗಳೂರು: `ಜೈನ ಸಾಹಿತ್ಯವು ಕನ್ನಡ ನಾಡು ನುಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಅದರ ಅಳ ಅಧ್ಯಯನ ಮತ್ತು ವಿಮರ್ಶೆಯಿಂದ ಕನ್ನಡ ನುಡಿಗೆ ಹೆಚ್ಚಿನ ಲಾಭವಿದೆ' ಎಂದು ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಂ.ಕೆ.ವಿಜಯಲಕ್ಷ್ಮಿ ಸ್ಮಾರಕ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಧರ್ಮ ಮತ್ತು ಸಾಹಿತ್ಯ ವಿರುದ್ಧ ದಿಕ್ಕಿನಲ್ಲಿದ್ದರೂ ಕೂಡ ಅವುಗಳ ನಡುವೆ ಸಮನ್ವಯತೆ ಸಾಧಿಸುವ ಮೂಲಕ ಪಂಪ ವಿಶೇಷ ಸಾಹಿತ್ಯ ಮೇಲ್ಪಂಕ್ತಿ ಹಾಕಿಕೊಟ್ಟ. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ಪ್ರಖರ ಪಾಂಡಿತ್ಯವಿದ್ದರೂ ಕನ್ನಡ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ' ಎಂದು ಶ್ಲಾಘನೆ ಮಾಡಿದರು.

`ಜೈನ ಸಾಹಿತ್ಯದಲ್ಲಿರುವ ಮಾನವೀಯತೆಯಂತಹ ಪ್ರಧಾನ ಅಂಶಗಳು ಸಾಹಿತ್ಯ ವಲಯದ ಪ್ರಮುಖ ಆಧಾರವಾಗುವ ತುರ್ತು ಇದೆ. ಹೊಸ ಬಗೆಯ ಕ್ರಮಗಳು ಆರಂಭಗೊಂಡರೂ ಸಾಹಿತ್ಯದ ಮೂಲಬೇರು ಮಾನವೀಯತೆಯಾಗಬೇಕು' ಎಂದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, ಸಾಹಿತಿ ಡಾ.ಎಸ್.ವಿ.ಸುಜಾತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.