ADVERTISEMENT

ಜೈಲಿನಲ್ಲಿರುವ ಉಗ್ರನಿಗೆ ಮೊಬೈಲ್ ತಲುಪಿಸುವ ಯತ್ನ!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ದಿನೇಶ್
ದಿನೇಶ್   

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ‘ಲಷ್ಕರ್–ಇ–ತಯಬಾ’ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಟಿ.ನಜೀರ್‌ಗೆ ಕೊಡಲು ವಾರಂಟ್ ಕವರ್‌ನಲ್ಲಿ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕಾನ್‌ಸ್ಟೆಬಲ್ ದಿನೇಶ್ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಎಆರ್ ದಕ್ಷಿಣ ವಿಭಾಗಕ್ಕೆ ಸೇರಿದ ದಿನೇಶ್, ಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ವಾರಂಟ್ ಕವರ್‌ನಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇಟ್ಟುಕೊಂಡು ಕಾರಾಗೃಹದ ಒಳಗೆ ಹೋಗಿದ್ದರು. ಅವರ ವರ್ತನೆ ಕಂಡು ಅನುಮಾನಗೊಂಡ ಜೈಲು ಅಧಿಕಾರಿಗಳು, ಕವರ್ ಪರಿಶೀಲಿಸುವಂತೆ ‘ಟವರ್‌–2’ ಗೇಟ್‌ನ ಸಿಬ್ಬಂದಿಗೆ ಸೂಚಿಸಿದ್ದರು.

ಸಿಬ್ಬಂದಿ ತಪಾಸಣೆ ಮಾಡಿದಾಗ ಮೊಬೈಲ್‌ಗಳು ಪತ್ತೆಯಾದವು. ಆ ನಂತರ ಅಧಿಕಾರಿಗಳು ಪರಪ್ಪನ ಅಗ್ರಹಾರ ‍‍ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ‘ವಂಚನೆ (ಐಪಿಸಿ 420) ಹಾಗೂ ಜೈಲು ಮ್ಯಾನ್ಯುಯಲ್‌ನ ನಿಯಮ ಉಲ್ಲಂಘಿಸಿದ ಆರೋಪದಡಿ ಕ್ರಮ ಜರುಗಿಸಿ ದಿನೇಶ್ ಅವರನ್ನು ಬಂಧಿಸಿದ್ದೇವೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

ADVERTISEMENT

ನಜೀರ್ ಯಾರು?: ‘ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ ಟಿ.ನಜೀರ್‌. ಜೈಲಿನಲ್ಲಿದ್ದುಕೊಂಡೇ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದವನು. ಆತನಿಗೆ ಕಾರಾಗೃಹದಲ್ಲಿ ಹೇಗೆ ಮೊಬೈಲ್ ಸಿಗುತ್ತಿತ್ತು ಎಂಬುದು ಈವರೆಗೂ ಗೊತ್ತಾಗಿರಲಿಲ್ಲ. ದಿನೇಶ್‌ ಅವರಂತೆಯೇ ಹಲವು ಸಿಬ್ಬಂದಿಯನ್ನು ಇಂಥ ಕೆಲಸಗಳಿಗೆ ಬಳಸಿಕೊಂಡಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2015ರ ಆಗಸ್ಟ್‌ನಲ್ಲಿ ನಜೀರ್, ತನ್ನನ್ನು ಭೇಟಿಯಾಗಲು ಕಾರಾಗೃಹಕ್ಕೆ ಬಂದಿದ್ದ ಸಂದರ್ಶಕರ ಮೂಲಕ ಸಹಚರ ಶಹನಾಜ್‌ಗೆ ಪತ್ರಗಳನ್ನು ತಲುಪಿಸಿದ್ದ. ಸ್ಫೋಟ ಪ್ರಕರಣದ ಸಾಕ್ಷಿಗಳು ಯಾರ‍್ಯಾರು, ಅವರನ್ನು ಏನು ಮಾಡಬೇಕು, ತಮ್ಮ ವಿರುದ್ಧ ಸಾಕ್ಷಿ ನುಡಿಯದಂತೆ ಹೇಗೆ ಅವರನ್ನು ಬೆದರಿಸಬೇಕು, ಸೇರಿದಂತೆ ಶಿಕ್ಷೆಯಿಂದ ಪಾರಾಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆ ಪತ್ರದಲ್ಲಿ ವಿವರಿಸಿದ್ದ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.