ADVERTISEMENT

ಟರ್ಮಿನಲ್ ವಿಸ್ತರಣಾ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 20:25 IST
Last Updated 8 ಸೆಪ್ಟೆಂಬರ್ 2011, 20:25 IST

ಬೆಂಗಳೂರು: ಹೆಚ್ಚಿನ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಲಿ `ಟರ್ಮಿನಲ್ 1 ಎ~ದ ವಿಸ್ತರಣಾ ಕಾಮಗಾರಿಯನ್ನು ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ವಿಸ್ತರಣೆ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಮಾಹಿತಿಗಳನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟರ್ಮಿನಲ್ ವಿಸ್ತರಣೆ ಹಿನ್ನೆಲೆಯಲ್ಲಿ ಆಗಸ್ಟ್ 31ರಿಂದ ಗಣ್ಯವ್ಯಕ್ತಿಗಳು ಹಾಗೂ ಟ್ಯಾಕ್ಸಿ ಸಂಚಾರಕ್ಕಾಗಿ ಉಪಯೋಗಿಸುತ್ತಿದ್ದ ಪ್ರಾಂಗಣವನ್ನು ಭಾಗಶಃ ಮುಚ್ಚಲಾಗಿದೆ. ತಡೆಗೋಡೆ ಪಕ್ಕದ ಪ್ರದೇಶ ಹೊರತು ಪಡಿಸಿ ಎರಡು ಮಾರ್ಗಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅಗತ್ಯ ಬಿದ್ದರೆ ಟ್ಯಾಕ್ಸಿ ನಿಲ್ಲುವ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಇಲ್ಲವೇ ಅದರ ವ್ಯಾಪ್ತಿಯನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ.

ಟರ್ಮಿನಲ್ ಕಟ್ಟಡದ ಎದುರಿನ ಮೇಲ್ಛಾವಣಿಯನ್ನು ವಿಸ್ತರಿಸುವ ಉದ್ದೇಶದಿಂದ ಡಿಸೆಂಬರ್ ವೇಳೆಗೆ ಅಸ್ತಿತ್ವದಲ್ಲಿರುವ ಒಳ ಪ್ರಾಂಗಣ ಹಾಗೂ ಹೊರ ಪ್ರಾಂಗಣವನ್ನು ಭಾಗಶಃ ಮುಚ್ಚಲಾಗುವುದು. ಈಗಿನ ಪ್ರಾಂಗಣದ ದಕ್ಷಿಣಕ್ಕೆ ವಾಹನ ನಿಲುಗಡೆಗಾಗಿ ತಾತ್ಕಾಲಿಕ ಪ್ರಾಂಗಣ ನಿರ್ಮಿಸಲಾಗುತ್ತಿದೆ.
 
ಈ ಪ್ರಾಂಗಣ ನಿರ್ಮಾಣವಾಗುವ ಸಂದರ್ಭದಲ್ಲಿ ಪಿ4 ಹಾಗೂ ಪಿ5 ವಾಹನ ನಿಲುಗಡೆ ವಿಭಾಗಗಳನ್ನು ಹಂಗಾಮಿಯಾಗಿ ಮುಚ್ಚಲಾಗುವುದು. ಹಳೆಯ ನಿಲುಗಡೆ ಪ್ರದೇಶಗಳಲ್ಲಿ ಬದಲಾವಣೆ ಕುರಿತ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಪಿ4 ಹಾಗೂ ಪಿ5 ನಿಲುಗಡೆ ತಾಣದಿಂದ ಪಾದಚಾರಿ ಮಾರ್ಗವನ್ನು ಹಂತಹಂತವಾಗಿ ಮುಚ್ಚಲಾಗುವುದು ಎಂದು ತಿಳಿಸಿರುವ ಬಿಐಎಎಲ್ ಎಲ್ಲಾ ಪ್ರಯಾಣಿಕರು ಕೇಂದ್ರೀಯ ನಡಿಗೆ ಮಾರ್ಗವನ್ನು ಬಳಸುವಂತೆ ಕೋರಿದೆ.

ವಿಮಾನ ಹಾರಾಟಕ್ಕೆ ಅಡ್ಡಿಯಾಗದಂತೆ ಅಸ್ತಿತ್ವದಲ್ಲಿರುವ ಟರ್ಮಿನಲ್‌ನ ಎರಡೂ ಬದಿಯಲ್ಲಿ ವಿಸ್ತರಣೆ ಕಾಮಗಾರಿಯನ್ನು ಹಂತ- ಹಂತವಾಗಿ ಆರಂಭಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈಗಿನ ಟರ್ಮಿನಲ್ ಜತೆಗೆ ನಿರ್ಮಾಣವಾಗಲಿರುವ ಹೊಸ ಟರ್ಮಿನಲ್ ಕೂಡ ಸೇರ್ಪಡೆಯಾಗಲಿದ್ದು ಪ್ರಯಾಣಿಕರ ಸಂಚಾರ ಇನ್ನಷ್ಟು ಸುಗಮವಾಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.