ADVERTISEMENT

ಟೋಲ್ ಸಂಗ್ರಹಕ್ಕೆ ವಿರೋಧ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST

ಬೆಂಗಳೂರು: ನಗರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಟೋಲ್ ಸಂಗ್ರಹಿಸಬಾರದು ಎಂದು ಆಗ್ರಹಿಸಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಾದರಹಳ್ಳಿ ಸಮೀಪ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ನವಯುಗ ದೇವನಹಳ್ಳಿ ಟೋಲ್ ಪ್ಲಾಜಾ ಲಿಮಿಟೆಡ್ (ಡಿಟಿಪಿಎಲ್) ಈ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಮುಂದಾಗಿದೆ. ಇದರಿಂದಾಗಿ ಟ್ಯಾಕ್ಸಿ ಚಾಲಕರಿಗೆ ಹೊರೆಯಾಗಲಿದೆ’ ಎಂದು ಅಖಿಲ ಭಾರತ ಮೋಟಾರು ಟ್ರಾನ್ಸ್‌ಪೋಟ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಹೇಳಿದರು.

‘ಟ್ಯಾಕ್ಸಿಯೊಂದು ನಗರದಿಂದ ಬಿಐಎಎಲ್‌ಗೆ ಪ್ರತಿ ದಿನ ಆರು ಬಾರಿ ಸಂಚರಿಸಲಿದೆ. ಪ್ರತಿ ಬಾರಿಯೂ 25 ರೂಪಾಯಿ ಟೋಲ್ ನೀಡಿದರೆ, ದಿನಕ್ಕೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಖಾಸಗಿ ವಾಹನಗಳೂ ಟೋಲ್ ಪಾವತಿಸುವುದು ಅನಿವಾರ್ಯವಾಗಲಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಿಸಲು ಅವಕಾಶವಿಲ್ಲ. ಆದ್ದರಿಂದ ಈಗಿರುವ ಟೋಲ್ ಕೇಂದ್ರವನ್ನು ಇನ್ನೂ ನೂರು ಅಡಿ ಮುಂದಕ್ಕೆ ಹಾಕಬೇಕು. ಹಾಗೆ ಮಾಡಿದರೆ ಟ್ಯಾಕ್ಸಿಗಳು ಟೋಲ್ ಮುಕ್ತವಾಗಲಿವೆ’ ಎಂದರು.‘ಟೋಲ್ ಸಂಗ್ರಹಿಸುವ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ಏ.17ರ ಮಧ್ಯರಾತ್ರಿಯಿಂದ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.