ADVERTISEMENT

`ಠಾಣೆಗಳಲ್ಲಿ ಸಹಾಯವಾಣಿ'

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST
ಮಹಿಳಾ ದಕ್ಷತಾ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು' ಕುರಿತ ಕಾರ್ಯಾಗಾರದಲ್ಲಿ ಸಮಿತಿ ಅಧ್ಯಕ್ಷೆ ಶರಣ್ಯಾ ಎಸ್. ಹೆಗ್ಡೆ, ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಂತಿ, ಕರ್ನಾಟಕ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದಾ ನಟರಾಜ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಬೇಲಾ ಜುಸ್ತಿ ಭಾಗವಹಿಸಿದ್ದರು
ಮಹಿಳಾ ದಕ್ಷತಾ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು' ಕುರಿತ ಕಾರ್ಯಾಗಾರದಲ್ಲಿ ಸಮಿತಿ ಅಧ್ಯಕ್ಷೆ ಶರಣ್ಯಾ ಎಸ್. ಹೆಗ್ಡೆ, ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಂತಿ, ಕರ್ನಾಟಕ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದಾ ನಟರಾಜ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಬೇಲಾ ಜುಸ್ತಿ ಭಾಗವಹಿಸಿದ್ದರು   

ಬೆಂಗಳೂರು: `ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಹಾಯವಾಣಿ ತೆರೆಯಲಾಗಿದ್ದು, ಮಹಿಳೆಯರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ಅಗತ್ಯವಿದೆ' ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣಬ್ ಮೊಹಾಂತಿ ತಿಳಿಸಿದರು.

ಮಹಿಳಾ ದಕ್ಷತಾ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು' ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳ ಮುಂದುವರಿದ ಭಾಗದಲ್ಲಿ ನಡೆಯುವ ಎಲ್ಲ ಲೋಪಗಳಿಗೂ ಪೊಲೀಸ್ ಮತ್ತು ಮಾಧ್ಯಮದವರನ್ನು  ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆದರೆ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗದಂತೆ ಹೆಣ್ಣಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಕಟಿಬದ್ಧರಾಗಿದ್ದಾರೆ' ಎಂದರು.

ADVERTISEMENT

`ಒಂಟಿ ಮಹಿಳೆಯರು, ವಿದ್ಯಾರ್ಥಿನಿಯರು ಆತ್ಮರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನೆ ಸದಸ್ಯರಿಂದಲೇ ನಡೆಯುವ ಅತ್ಯಾಚಾರದಂತಹ ಪ್ರಕರಣ ಭೇದಿಸುವಲ್ಲಿ ಪೊಲೀಸರು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಆದರೆ ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು' ಎಂದರು.

ಬೆಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಬೇಲಾ ಜುಸ್ತಿ, `ಮನೆಯಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿದ ಘಟನೆಗಳು ಈಚೆಗೆ ನಡೆದಿದೆ. ಸುರಕ್ಷತೆ ತಾಣವಾಗಬೇಕಿದ್ದ ಮನೆ ಮಹಿಳೆಯರ ಪಾಲಿಗೆ ನೋವು ನೀಡುವ ಜಾಗವಾಗಿ ಬದಲಾಗುತ್ತಿರುವುದು ಆತಂಕದ ಬೆಳವಣಿಗೆ' ಎಂದರು.

`ಕೆಲವೇ ಮಂದಿ ಮಾಡುವ ತಪ್ಪಿಗೆ ಇಡೀ ಪುರುಷ ಸಂಕುಲವನ್ನೇ ಅನುಮಾನಿಸುವಂತಾಗಿದೆ. ಹಾಗಾಗಿ ಲೈಂಗಿಕ ದೌರ್ಜನ್ಯವೆಸಗುವ ಪುರುಷರ ವಿರುದ್ಧ ಪ್ರಜ್ಞಾವಂತ ಪುರುಷರು ಸಿಟ್ಟಿಗೇಳಬೇಕಿದೆ. ಹೆಣ್ಣಿಗೆ ಅನ್ಯಾಯವಾದಾಗ ಮಗಳೋ, ತಂಗಿಯೋ ಎಂದು ಭಾವಿಸಿ ನ್ಯಾಯ ನೀಡುವಲ್ಲಿ ಪುರುಷರು ಮುಂದಾದರೆ ಇಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲು ಸಾಧ್ಯ' ಎಂದರು.

ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವಿನೋದಾ ನಟರಾಜ, `ಮಹಿಳೆಯರ ಮೇಲಿನ ದೌರ್ಜನ್ಯ ಆಧುನಿಕ ಸ್ವರೂಪ ಪಡೆದಿದ್ದು, ಅದನ್ನು ತೊಡೆದುಹಾಕುವ ದೊಡ್ಡ ಜವಾಬ್ದಾರಿ ಮಹಿಳಾ ಸಂಘಟನೆಗಳ ಮೇಲಿದೆ' ಎಂದರು. ವಿಕ್ಟೋರಿಯಾ ಆಸ್ಪತ್ರೆ ಡಾ. ಕಸ್ತೂರಿ, ಪತ್ರಕರ್ತೆ ಸೀತಾಲಕ್ಷ್ಮಿ, ಇಂಟೆಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸೊಸೈಟಿ ಯೋಜನಾ ನಿರ್ದೇಶಕಿ ಶಶಿಕಲಾ ಶೆಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.