ADVERTISEMENT

ಡಾ.ರಾಜ್ ಸ್ಮಾರಕಕ್ಕೆ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: `ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗುತ್ತಿರುವ ಡಾ.ರಾಜ್‌ಕುಮಾರ್ ಅವರ ಸ್ಮಾರಕ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಅದೇ ತಿಂಗಳು ಉದ್ಘಾಟನೆಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ~ ಎಂದು ಸಚಿವ ಆರ್. ಅಶೋಕ ಪ್ರಕಟಿಸಿದರು.

ಬುಧವಾರ ಬೆಳಿಗ್ಗೆ ರಾಜ್ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, `ಉದ್ಘಾಟನೆ ದಿನಾಂಕದ ಕುರಿತು ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಕೆಲ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ವೇಳೆಗೆ ಮುಗಿಯಲಿವೆ. ಸಮಾಧಿ ಬಳಿ ನಿರಂತರ ಜ್ಯೋತಿ ಬೆಳಗುವ ವ್ಯವಸ್ಥೆ, ಗಾಜಿನ ಮನೆ ನಿರ್ಮಾಣ, ಉದ್ಯಾನದಲ್ಲಿ ಸಸಿಗಳ ನೆಡುವಿಕೆ, ರಾಜ್ ಅಭಿಮಾನಿಗಳಿಗೆ ಸೂಕ್ತ ಆಸನ ವ್ಯವಸ್ಥೆ, ಶಿಲಾಫಲಕಗಳಿಗೆ ರಾಜ್‌ಕುಮಾರ್ ಅವರ ಅಭಿನಯದ ಚಿತ್ರಗಳ ಪೋಸ್ಟರ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ~ ಎಂದು ಅವರು ಹೇಳಿದರು.

`ಸ್ಮಾರಕ ಬಳಿ ನಿರ್ಮಾಣವಾಗುತ್ತಿರುವ ಗೋಪುರ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ~ ಎಂದರು. ಶಾಸಕ ನೆ.ಲ.ನರೇಂದಬಾಬು, ಮೇಯರ್ ಪಿ.ಶಾರದಮ್ಮ, ಉಪಮೇಯರ್ ಎಸ್.ಹರೀಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ಪಾಲಿಕೆ ಸದಸ್ಯ ಎಂ.ನಾಗರಾಜ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ರುದ್ರೇಶ್, ವ್ಯವಸ್ಥಾಪಕ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.