ADVERTISEMENT

‘ಡಾಲರ್ಸ್‌ ಕಾಲೊನಿ ಅಲ್ಲ, ಕೊಳಚೆ ನೀರಿನ ಕಾಲೊನಿ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 20:06 IST
Last Updated 14 ಮಾರ್ಚ್ 2018, 20:06 IST
‘ಡಾಲರ್ಸ್‌ ಕಾಲೊನಿ ಅಲ್ಲ, ಕೊಳಚೆ ನೀರಿನ ಕಾಲೊನಿ’
‘ಡಾಲರ್ಸ್‌ ಕಾಲೊನಿ ಅಲ್ಲ, ಕೊಳಚೆ ನೀರಿನ ಕಾಲೊನಿ’   

ಬೆಂಗಳೂರು: ‘ಜೆ.ಪಿ ನಗರದ ಡಾಲರ್ಸ್‌ ಕಾಲೊನಿಯಲ್ಲಿ ರಾಜಕಾಲುವೆಗೆ ಒಳಚರಂಡಿ ನೀ‌ರನ್ನು ಹರಿಸಲಾಗುತ್ತಿದೆ. ಹೀಗಾಗಿ ಇದೊಂದು ಕೊಳಚೆ ನೀರಿನ ಕಾಲೊನಿಯಾಗಿದೆ’ ಎಂದು ದೂರುತ್ತಾರೆ ಇಲ್ಲಿನ ಸ್ಥಳೀಯರು.

‘ಕಾಲೊನಿಯ ನಿರ್ಮಾಣದ ವೇಳೆ ಬಿಡಿಎ ರಾಜಕಾಲುವೆಯನ್ನು ನಿರ್ಮಿಸಿತ್ತು. ಬಡಾವಣೆ ಬೆಳೆದಂತೆ ಅದಕ್ಕೆ ತಕ್ಕಂತಹ ಒಳಚರಂಡಿ ಕಾಲುವೆಗಳನ್ನು ನಿರ್ಮಿಸಲಿಲ್ಲ. ಜಲಮಂಡಳಿಯು ಕೊಳಚೆನೀರನ್ನು ಈ ಕಾಲುವೆಗೆ ಹರಿಸುತ್ತಿದೆ. ಈ ಕೊಳಕು ನೀರು ಮಡಿವಾಳ ಕೆರೆಯನ್ನು ಸೇರುತ್ತಿದೆ. ಇದರಿಂದ ಕೆರೆಯೂ ಕಲುಷಿತಗೊಂಡಿದೆ’ ಎಂದು ಸ್ಥಳೀಯ ನಿವಾಸಿ ಎ. ಗುಂಡಾ ಭಟ್‌ ದೂರಿದರು.

‘ಶ್ರೀಮಂತರು ಹಾಗೂ ಮಧ್ಯಮ ವರ್ಗದ ಜನ ಇಲ್ಲಿ ವಾಸಿಸುತ್ತಿದ್ದಾರೆ. ಸಮರ್ಪಕ ಕಾಲುವೆ ವ್ಯವಸ್ಥೆ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ’ ಎಂದರು.

ADVERTISEMENT

‘ಕೊಳಚೆ ನೀರಿನಿಂದಾಗಿ ದುರ್ವಾಸನೆ ಅಧಿಕವಾಗಿದೆ. ಈ ಬಗ್ಗೆ ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಣ್ಣೊರೆಸುವ ತಂತ್ರವಾಗಿ, ಅಧಿಕಾರಿಗಳು ಕಾಲುವೆಯಲ್ಲಿನ ಹೂಳೆತ್ತುವ ಕೆಲಸ ಪ್ರಾರಂಭಿಸಿದ್ದಾರೆ. ಮಳೆಗಾಲದಲ್ಲಿ ಪದೇ ‍ಪದೇ ಮನೆಗೆ ನೀರು ನುಗ್ಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.