ADVERTISEMENT

ಡಿಆರ್‌ಡಿಒ ಜತೆ ಬ್ರಿಟನ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 19:40 IST
Last Updated 8 ಫೆಬ್ರುವರಿ 2011, 19:40 IST

ಬೆಂಗಳೂರು: ‘ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಪಟ್ಟಂತೆ ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ (ಡಿಆರ್‌ಡಿಒ) ಸದ್ಯದಲ್ಲೇ ಒಡಂಬಡಿಕೆ ಮಾಡಿಕೊಳ್ಳಲಾಗುವುದು’ ಎಂದು ಬ್ರಿಟನ್ನಿನ ರಕ್ಷಣಾ ಮತ್ತು ಸುರಕ್ಷತಾ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಪೆನಿಗ್ಯೂನ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟ ಉಪಕರಣಗಳ ತಯಾರಿಕೆ ಹಾಗೂ ಅಭಿವೃದ್ಧಿ ಸೇರಿದಂತೆ 12 ಪ್ರಮುಖ ಕ್ಷೇತ್ರಗಳಲ್ಲಿ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದರು.

‘ಬ್ರಿಟನ್ನಿನ ವಿ.ವಿ ಮತ್ತು ವಿಜ್ಞಾನ ಖಾತೆ ಸಚಿವ ಡೇವಿಡ್ ವಿಲ್ಲೆಟ್ ಅವರು ನವೆಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆನಂತರ ಕೆಲವು ಸುತ್ತಿನ ಮಾತುಕತೆ ಕೂಡ ನಡೆದಿದೆ. ಸದ್ಯದಲ್ಲೇ ಈ ಕುರಿತು ಡಿಆರ್‌ಡಿಒನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ರಕ್ಷಣೆ, ವಿಮಾನಯಾನ ಹಾಗೂ ಸುರಕ್ಷತೆಗೆ ಸಂಬಂಧಪಟ್ಟಂತೆ ಬ್ರಿಟನ್ನಿನ ಸುಮಾರು 40 ಕಂಪೆನಿಗಳು ‘ಏರೊ ಇಂಡಿಯಾ-2011’ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಮೇಳ ಎಂಬ ಹೆಗ್ಗಳಿಕೆ ಪಡೆದ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ’ ಎಂದರು.

‘ಬ್ರಿಟನ್ ಕೂಡ ರಕ್ಷಣಾ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದೆ. ಲಘು ಯುದ್ದ ವಿಮಾನಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ರಕ್ಷಣಾ ಉಪಕರಣಗಳ ತಯಾರಿಕೆ ಕಾರ್ಯ ನಿರಂತರವಾಗಿ ನಡೆದಿದೆ. ಅಮೆರಿಕ ಹೊರತುಪಡಿಸಿದರೆ ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಬಂಡವಾಳ ವಿನಿಯೋಗಿಸುವ ರಾಷ್ಟ್ರ ಎಂದರೆ ಬ್ರಿಟನ್. ಉನ್ನತ ತಂತ್ರಜ್ಞಾನದ ಉಪಕರಣಗಳ ತಯಾರಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಬ್ರಿಟನ್ನಿನ ವಾಯುಪಡೆಯ ಏರ್ ಮಾರ್ಷಲ್ ಲೀಸನ್, ಬ್ರಿಟನ್ನಿನ ರಕ್ಷಣಾ ಮತ್ತು ಸುರಕ್ಷತೆ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಅಲೆನ್ ಮಲ್ಪಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.