ಬೆಂಗಳೂರು: ಜಿಲ್ಲಾ ಆರೋಗ್ಯಾಧಿಕಾರಿಗಳ (ಡಿಎಚ್‌ಒ) ಕಚೇರಿಯನ್ನು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸ್ಥಳಾಂತರಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ರೀತಿ ಸ್ಥಳಾಂತರ ಮಾಡಿರುವುದು ಒಳ್ಳೆಯ ಸಂಪ್ರದಾಯ ಅಲ್ಲ ಎಂದು ಜೆಡಿಎಸ್ ಸದಸ್ಯ ಮಧು ಬಂಗಾರಪ್ಪ ಟೀಕಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆಯಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲಾ ಆರೋಗ್ಯಾಧಿಕಾರಿಗಳು ಶಿಕಾರಿಪುರದಲ್ಲಿ ಇರುವುದರಿಂದ ಕೆಲಸಗಳಿಗಾಗಿ ಅಲ್ಲಿಗೆ ಹೊಗಲು ಜನರಿಗೆ ತೊಂದರೆ ಆಗಿದೆ. ಡಿಎಚ್‌ಒಗಳು ಜಿಲ್ಲಾ ಕೇಂದ್ರದಲ್ಲೇ ಇರುವಂತೆ ಮಾಡಿ ಎಂದರು.
ಆಗ ಎದ್ದು ನಿಂತ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ, `ಪ್ರತ್ಯೇಕವಾದ ಸರ್ಕಾರಿ ಆದೇಶದ ಮೂಲಕ ಸ್ಥಳಾಂತರವಾಗಿದೆ. ಈ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆ ಮಾಡೋಣ' ಎಂದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಇದಕ್ಕೆ ಒಪ್ಪಿದರು.
ಇದಕ್ಕೂ ಮುನ್ನ ಆರೋಗ್ಯ ಸಚಿವರ ಪರವಾಗಿ ಉತ್ತರಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯನ್ನು ಶಿಕಾರಿಪುರಕ್ಕೆ ಸ್ಥಳಾಂತರ ಮಾಡಿಲ್ಲ. ಹಾಸಿಗೆಗಳ ಸಂಖ್ಯೆಯನ್ನು 650ರಿಂದ 950ಕ್ಕೆ ಹೆಚ್ಚಿಸಲಾಗಿದೆ. ಅಗತ್ಯವಿರುವ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲಾಗಿದೆ ಎಂದರು.
ಶಿಕಾರಿಪುರದ ಆಸ್ಪತ್ರೆ 150 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಅದನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.