ADVERTISEMENT

ಡಿಜಿಟಲ್‌ ಸೇವೆಗೆ ಪರ್ಯಾಯ ವ್ಯವಸ್ಥೆಯ ಚಿಂತನೆ

ಯುಎಫ್‌ಎ– ಕ್ಯೂಬ್‌ ಜತೆ ವಾಣಿಜ್ಯ ಮಂಡಳಿ ಮಾತುಕತೆ ವಿಫಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 20:05 IST
Last Updated 24 ಫೆಬ್ರುವರಿ 2018, 20:05 IST

ಬೆಂಗಳೂರು: ‘ಡಿಜಿಟಲ್‌ ಸೇವೆ ಪೂರೈಕೆದಾರ ಕಂಪನಿಗಳಾದ ಯುಎಫ್‌ಎ ಮತ್ತು ಕ್ಯೂಬ್‌, ಕಡಿಮೆ ಬೆಲೆ ನಿಗದಿಪಡಿಸಲು ಒಪ್ಪದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ ಅವರು ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ವಿತರಕರ ಜತೆ ಸಭೆ ನಡೆಸಲಾಗುವುದು. ಅವರೊಂದಿಗೆ ಚರ್ಚಿಸಿ ಮುಂದಿನ ನಡೆ ಏನು ಎಂದು ತೀರ್ಮಾನಿಸಲಾಗುವುದು’ ಎಂದೂ ಅವರು ಹೇಳಿದರು.

ಬಂಡವಾಳದ ಕೊರತೆ: ಸೆಟಲೈಟ್‌ಗಳ ಮೂಲಕ ಪ್ರದರ್ಶನದ ಸೇವೆ ಒದಗಿಸಲು ಹಲವು ಕಂಪನಿಗಳು ಮುಂದೆ ಬಂದಿವೆ. ಆದರೆ ಅವುಗಳಿಗೆ ಬಂಡವಾಳ ಸಿಗುತ್ತಿಲ್ಲ. ‘ಸೆಟಲೈಟ್‌ ಮೂಲಕ ಒಮ್ಮೆಲೇ ಇನ್ನೂರು, ಮುನ್ನೂರು ಪ್ರದರ್ಶನಗಳನ್ನು ಮಾಡಬೇಕು ಎಂದರೆ ಅದಕ್ಕೆ ಸರ್ವರ್‌ಗಳು ಮತ್ತು ಪ್ರೊಜೆಕ್ಟರ್‌ಗಳು ಬೇಕು. ಅವುಗಳನ್ನು ಒದಗಿಸಲು ಕನಿಷ್ಠ ₹ 25–30 ಕೋಟಿ ಬಂಡವಾಳ ಬೇಕಾಗುತ್ತದೆ. ನಾವೀಗ ಅಷ್ಟು ಬಂಡವಾಳ ಹೂಡುವವರನ್ನು ಹುಡುಕಬೇಕಿದೆ’ ಎಂದು ಅವರು ತಮ್ಮ ಮುಂದಿರುವ ಸವಾಲಿನ ಕುರಿತು ಹೇಳಿದರು.

ADVERTISEMENT

ಡಿಜಿಟಲ್‌ ಸೇವೆ ಪೂರೈಕೆದಾರ ಸಂಸ್ಥೆಗಳಾದ ಯುಎಫ್‌ಎ ಮತ್ತು ಕ್ಯೂಬ್‌ಗಳೊಂದಿಗೆ, ದರ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಸಭೆ ನಡೆಸಿತ್ತು. ಡಿಜಿಟಲ್‌ ಸೇವೆಗೆ ಈಗ ವಿಧಿಸುತ್ತಿರುವ ದರದಲ್ಲಿ ಶೇ 25ರಷ್ಟು ಕಡಿಮೆ ಮಾಡಿ ಎಂಬ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿದ್ದ ಕಂಪನಿಗಳು ಕೇವಲ ಶೇ 9ರಷ್ಟು ಮಾತ್ರ ಕಡಿಮೆ ಮಾಡಲು ಒಪ್ಪಿಕೊಂಡಿದ್ದರು. ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಮಾರ್ಚ್‌ 2ರಿಂದ ದಕ್ಷಿಣ ಭಾರತದ ಆರು ರಾಜ್ಯಗಳ ಯಾವುದೇ ಹೊಸ ಸಿನಿಮಾಗಳನ್ನು ಆ ಸಂಸ್ಥೆಗಳಿಗೆ ನೀಡದಿರಲು ನಿರ್ಧರಿಸಲಾಗಿತ್ತು. 

ಬಿಡುಗಡೆಯಾದ ಚಿತ್ರಗಳಿಗೆ ತೊಂದರೆ ಇಲ್ಲ: ‘ಈಗಾಗಲೇ ಬಿಡುಗಡೆಯಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗೆಯೇ ಈಗಾಗಲೇ ಕ್ಯೂಬ್‌ ಅಥವಾ ಯುಎಫ್‌ಎ ಜತೆ ಒಪ್ಪಂದ ಮಾಡಿಕೊಂಡ ಸಿನಿಮಾಗಳ ಪ್ರದರ್ಶನವನ್ನು ಅವರೇ ಮಾಡುವುದು ಅನಿವಾರ್ಯ. ಆದರೆ ಇನ್ನು ಮುಂದೆ ಯಾವುದೇ ಹೊಸ ಸಿನಿಮಾಗಳನ್ನು ನೀಡದಿರಲು ನಿರ್ಧರಿಸಲಾಗಿದೆ’ ಎಂದೂ ಗೋವಿಂದ ಹೇಳಿದ್ದಾರೆ.
***
ಕ್ಯೂಬ್‌, ಯುಎಫ್‌ಎ ಯಾಕೆ ಬೇಕು?

ಕ್ಯೂಬ್‌ ಮತ್ತು ಯುಎಫ್‌ಎ ಇವೆರಡು ಡಿಜಿಟಲ್‌ ಸೇವೆ ಪೂರೈಕೆಯ ಜನಪ್ರಿಯ ಸಂಸ್ಥೆಗಳು. ಮೊದಲು ಸಿನಿಮಾಗಳನ್ನು ರೀಲ್‌ಗಳಲ್ಲಿ ತಂದು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಆದರೆ ಈಗ ಪ್ರದರ್ಶನ ವ್ಯವಸ್ಥೆ ಡಿಜಿಟಲ್‌ ರೂಪಕ್ಕೆ ಬದಲಾಗಿದೆ. ಸೆಟಲೈಟ್‌ ಮೂಲಕ ಏಕಕಾಲದಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನಕ್ಕೆ ಕ್ಯೂಬ್‌ ಮತ್ತು ಯುಎಫ್‌ಎ ಕಂಪನಿಗಳು, ಚಿತ್ರಮಂದಿರಗಳಿಗೆ ಸರ್ವರ್‌ಗಳು ಮತ್ತು ಇಂಟಿಗ್ರೇಟೆಡ್‌ ಮೀಡಿಯಾ ಬ್ಲಾಕ್‌ಗಳನ್ನು (ಐಎಂಬಿ) ಒದಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.