ADVERTISEMENT

ಡಿ.ಜಿ, ಕಮಿಷನರ್‌ಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:46 IST
Last Updated 9 ಏಪ್ರಿಲ್ 2018, 19:46 IST

ಬೆಂಗಳೂರು: ‘ಪಕ್ಷದ ಪ್ರಚಾರಕ್ಕೆ ಅವಕಾಶ ಕಲ್ಪಿಸಲು ಕೋರಿದ ಅರ್ಜಿ ಪರಿಗಣಿಸಿಲ್ಲ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ‘ರಕ್ಷಕ ಸೇನಾ’ ದಾಖಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್‌ ಕುಮಾರ್‌ಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ‘ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘ’ದ ಅಧ್ಯಕ್ಷ ವಿ.ಶಶಿಧರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಹಾಗೂ ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌, ‘ರಕ್ಷಕ ಸೇನಾ ಹೆಸರಿನ ರಾಜಕೀಯ ಪಕ್ಷವನ್ನು ಅರ್ಜಿದಾರರು ಸ್ಥಾಪಿಸಿದ್ದಾರೆ. ಈ ಪಕ್ಷದ ಪ್ರಚಾರಕ್ಕೆ ಅವಕಾಶ ಕೋರಿದ ಅರ್ಜಿಯನ್ನು ಆರು ವಾರಗಳಲ್ಲಿ ಪರಿಗಣಿಸಿ ಎಂದು ಏಕಸದಸ್ಯ ನ್ಯಾಯಪೀಠ ಪೊಲೀಸರಿಗೆ ಆದೇಶಿಸಿತ್ತು. ಈ ಆದೇಶದಂತೆ ಡಿ.ಜಿ ಮತ್ತು ಐ.ಜಿ. ಹಾಗೂ ಬೆಂಗಳೂರು ನಗರ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮನವಿಯನ್ನು ಪರಿಗಣಿಸಿಲ್ಲ’ ಎಂದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ತುರ್ತು ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.