ADVERTISEMENT

ಡಿನೋಟಿಫಿಕೇಷನ್ ಆದೇಶ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: ಬೇಗೂರು ಹೋಬಳಿಯ ಅರಕೆರೆ ಗ್ರಾಮದಲ್ಲಿನ 3.26 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ ಮಾಡಿರುವ) ಆದೇಶದ ವಿವಾದ ಹೈಕೋರ್ಟ್ ಮೆಟ್ಟಿಲೇರುತ್ತಲೇ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆದಿರುವ ಕುರಿತು ಕೋರ್ಟ್‌ಗೆ ಗುರುವಾರ ಮಾಹಿತಿ ದೊರಕಿತು.

ಸರ್ವೆ ನಂ. 79 ಹಾಗೂ 80/1ರಲ್ಲಿ ಬಿಟಿಎಂ ಲೇಔಟ್ 6ನೇ ಹಂತದ ನಿರ್ಮಾಣಕ್ಕೆ ಈ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು 1987ರಲ್ಲಿ ಪ್ರಾಥಮಿಕ ಹಾಗೂ 1990ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ 1990ರಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡು ಅದನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಅದನ್ನು ಅನೇಕ ಮಂದಿಗೆ ಸರ್ಕಾರ ಮಾರಿತ್ತು. 

ಈ ನಿವೇಶನದಾರರು ತಮ್ಮ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ನಿವೇಶನ ಪಡೆದುಕೊಂಡ ಅರ್ಜಿದಾರರು ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. 2010ರ ಸೆಪ್ಟೆಂಬರ್ 22ರಂದು ಸರ್ಕಾರ ಭೂಸ್ವಾಧೀನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿತು.

ಇದರಿಂದಾಗಿ ಈಗ ಮನೆ ನಿರ್ಮಿಸಿಕೊಂಡ ಹಲವು ಜನರು ತಮಗೆ ದಿಕ್ಕುತೋಚದಾಗಿದೆ ಎಂದು ತಿಳಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೆ.22ರ ಆದೇಶಕ್ಕೆ ಹೈಕೋರ್ಟ್ ಕಳೆದ ವರ್ಷ ಮಧ್ಯಂತರ ತಡೆ ನೀಡಿತ್ತು.

ಇದರ ವಿಚಾರಣೆ ಇನ್ನೂ ಇತ್ಯರ್ಥಕ್ಕೆ ಬಾಕಿ ಇರುವ ಮಧ್ಯೆಯೇ, ಇದೇ 13ರಂದು ಸೆ.22ರ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಗೆ ಸರ್ಕಾರದ ಪರ ವಕೀಲರು ತಿಳಿಸಿದರು. ಅರ್ಜಿದಾರರ ಮನವಿ ಈಡೇರಿದ ಕಾರಣ, ಎಲ್ಲ ಅರ್ಜಿಗಳನ್ನು ನ್ಯಾಯಮೂರ್ತಿಗಳು ಇತ್ಯರ್ಥಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.