ADVERTISEMENT

ತಪ್ಪದೇ ಪೋಲಿಯೊ ಹಾಕಿಸಿ: ಮೇಯರ್ ಮನವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಸಾರ್ವಜನಿಕರು ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ದೇಶವನ್ನು ಪೋಲಿಯೊ ಮುಕ್ತವನ್ನಾಗಿ ಮಾಡಬೇಕು ಎಂದು ಬಿಬಿಎಂಪಿ ಮೇಯರ್ ಶಾರದಮ್ಮ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜನರಲ್ಲಿ ಅರಿವು ಮೂಡಿಸಲು ಬಿಬಿಎಂಪಿ ವತಿಯಿಂದ ನಗರದ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐದು ವರ್ಷದೊಳಗಿನ 6.5 ಲಕ್ಷ ಮಕ್ಕಳು ನಗರದಲ್ಲಿದ್ದು, ಪೋಲಿಯೊ ಲಸಿಕೆ ಹಾಕಿಸುವ ಸಿದ್ದತೆಯನ್ನು ಈಗಾಗಲೇ ಪಾಲಿಕೆ ಮಾಡಿಕೊಂಡಿದೆ. ನಗರದಲ್ಲಿ 78 ಯೋಜನಾ ಘಟಕಗಳಿದ್ದು, 422 ಮೇಲ್ವಿಚಾರಕರಿದ್ದಾರೆ. ವಲಯವಾರು ಮೇಲ್ವಿಚಾರಣೆಗೆ ವೈದ್ಯರು ಹಾಗೂ ಉಪವೈದ್ಯರನ್ನು ನೇಮಿಸಲಾಗಿದೆ ಎಂದರು.

ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಅಂಗವಿಕಲರಾಗುವುದು ಬೇಡ. ಫೆಬ್ರವರಿ 19 ಹಾಗೂ ಏಪ್ರಿಲ್ 1 ರಂದು ನಗರದಲ್ಲಿ ಪಲ್ಸ್ ಪೊಲಿಯೊ ಕಾರ್ಯಕ್ರಮ ನಡೆಯಲಿದ್ದು, ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

 ಬಿಬಿಎಂಪಿ ಉಪಮೇಯರ್ ಹರೀಶ್, ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ನಟಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.