ಬೆಂಗಳೂರು: ತರಕಾರಿ ಮತ್ತು ದ್ವಿದಳ ಧಾನ್ಯಗಳ ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಇನ್ನೂ ಚೇತರಿಸಿಕೊಳ್ಳುವ ಮೊದಲೇ ಈಗ ಹಣ್ಣುಗಳ ಬೆಲೆಯು ಏರಿದೆ. ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಕೆ.ಜಿ.ಗೆ 10 ರಿಂದ 12 ರೂಪಾಯಿಗಳಷ್ಟು ಹೆಚ್ಚಾಗಿದೆ.
ನಗರದ ಮಾರುಕಟ್ಟೆಗೆ ಚೆನ್ನೈನಿಂದ ಬಾಳೆ, ಆಂಧ್ರಪ್ರದೇಶದಿಂದ ಮಾವಿನ ಹಣ್ಣುಗಳು ಪೂರೈಕೆಯಾಗುತ್ತವೆ. ನಗರದ ಪಕ್ಕದ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಸಾಮಾನ್ಯವಾಗಿ ದ್ರಾಕ್ಷಿ ಮತ್ತು ಮಾವಿನಹಣ್ಣು ಮಾರುಕಟ್ಟೆಗೆ ಬರುತ್ತವೆ.
ಆದರೆ, ಮುಖ್ಯವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮಾರುಕಟ್ಟೆಗೆ ಹಣ್ಣುಗಳು ಪೂರೈಕೆಯಾಗಿಲ್ಲ. ಆದ್ದರಿಂದ ಹಣ್ಣುಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿದೆ.
ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಣ್ಣುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಶ್ರಾವಣ ಮಾಸದ ಬಂತೆಂದರೆ ಸಾಕು; ವರಮಹಾಲಕ್ಷ್ಮಿ ಪೂಜೆ, ಮಂಗಳಗೌರಿ ಪೂಜೆ, ನಾಗರ ಪಂಚಮಿ, ಭೀಮನ ಅಮಾವಾಸ್ಯೆ ಹೀಗೆ ಹಬ್ಬಗಳ ಸರದಿ ಶುರುವಾಗುತ್ತೆ. ಇದರಿಂದ ಹಣ್ಣುಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
`ತರಕಾರಿಗಳ ಬೆಲೆ ಹೆಚ್ಚಾಗಿದೆ, ಈಗ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಇದು ಹೀಗೆ ಮುಂದುವರಿದರೆ, ನಾವು ಹೊಟ್ಟೆಗೆ ಮಣ್ಣು ತಿನ್ನಬೇಕಾಗುತ್ತದೆ. ಇಂದು ಯಾವುದರ ಬೆಲೆ ಹೆಚ್ಚಾಗಿದೆ ಎಂದು ಯೋಚಿಸುತ್ತಲೇ ಏಳಬೇಕಾದ ದಿನಗಳು ಬಂದಿವೆ. ಇದು ಹೀಗೆ ಆದರೆ, ಜನಸಾಮಾನ್ಯರು ಹೇಗೆ ಬದುಕಬೇಕು. ಬೆಳಿಗ್ಗೆ ಅಂಗಡಿಗೆ ಬಂದು ಕೇಳಿದರೆ, ಎಲ್ಲ ಬೆಲೆಯೂ ಎರಡರಷ್ಟು ಆಗಿರುತ್ತವೆ~ ಎಂದು ಹಣ್ಣುಗಳನ್ನು ಕೊಳ್ಳಲು ಬಂದ ಅನಸೂಯ ಅವರು ತಮ್ಮ ಅಸಮಾಧಾನ ಹೊರಹಾಕುತ್ತಾರೆ.
`ಎಲ್ಲ ಬೆಲೆಗಳ ಹೆಚ್ಚಳಕ್ಕೆ ಪ್ರಮುಖವಾದ ಕಾರಣವೆಂದರೆ ಮಳೆ. ಈಗ ಬೆಂಗಳೂರಿನಲ್ಲಿ ಅಲ್ಪ ಮಳೆಯಾಯಿತು. ಮಡಿಕೇರಿ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಈ ರೀತಿ ರಾಜ್ಯದ ಅನೇಕ ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಇದರಿಂದ ಉತ್ಪಾದನೆ ಕಡಿಮೆಯಾಗಿದೆ. ಉತ್ಪಾದನೆ ಕಡಿಮೆಯಾಗಿರುವುದರಿಂದ ಮಾರುಕಟ್ಟೆಗೆ ಹಣ್ಣು ಪೂರೈಕೆಯಾಗುತ್ತಿಲ್ಲ.
ಆದರೆ, ಜನರ ಬೇಡಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 4 ಅಥವಾ 5 ಜಿಲ್ಲೆಗಳಲ್ಲಿ ನಿಯಮಿತವಾಗಿ ಮಳೆಯಾಗಿದೆ. ಉಳಿದ ಕಡೆ ಆಗಿಲ್ಲ. ಈ ರೀತಿ ಬೆಲೆಯ ಏರುಪೇರಿಗೆ ಒಂದು ರೀತಿ ಪರಿಸರ ಕಾರಣವಾದರೆ, ಇನ್ನೊಂದೆಡೆ ಸರ್ಕಾರದ ಯೋಜನೆಗಳು. ಉತ್ಪಾದನೆ ಕಡಿಮೆಯಾಗಲು ಮುಖ್ಯ ಕಾರಣ ಈಗ ಯಾರೂ ಜಮೀನಿನಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ ಎಲ್ಲರೂ ನಗರದಲ್ಲಿ ವಾಸಿಸಲು ಇಷ್ಟಪಡುತ್ತಾರೆ~ ಎನ್ನುತ್ತಾರೆ ಹಾಪ್‌ಕಾಮ್ಸನ ವ್ಯವಸ್ಥಾಪಕ ನಿರ್ದೇಶಕ ಎಸ್. ಷಣ್ಮುಖಪ್ಪ.
`ಮಳೆಯೇ ಕಾರಣ~
`ಮಳೆಯ ಕಾರಣದಿಂದ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಣ್ಣುಗಳು ಒಳ್ಳೆಯ ಗುಣಮಟ್ಟದಲ್ಲಿ ಬರುತ್ತಿಲ್ಲ. ಕಡಿಮೆ ಗುಣಮಟ್ಟದ ಹಣ್ಣುಗಳು ಜ್ಯೂಸ್ ತಯಾರಿಸಲು ಹೋಗುತ್ತವೆ. ಲಾರಿಯಲ್ಲಿ ಬರುವ ಒಂದು ಲೋಡ್ ಹಣ್ಣುಗಳಲ್ಲಿ ಒಂದು ಕ್ವಿಂಟಾಲ್ ಹಣ್ಣು ಮಾತ್ರ ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಏರಿಕೆಯಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಹಣ್ಣುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಸಾರಿಗೆ ವೆಚ್ಚ ಮತ್ತು ಹಾಳಾದ ಹಣ್ಣುಗಳ ನಷ್ಟ ಭರಿಸಲು ವ್ಯಾಪಾರಿಗಳು ಹೆಚ್ಚಿನ ಬೆಲೆಯಲ್ಲಿ ಹಣ್ಣುಗಳನ್ನು ಮಾರುತ್ತಾರೆ. ಈಗ ರಾಜ್ಯದ ಇತರೆ ಕಡೆಗಳಲ್ಲಿ ಮಳೆಯಾಗುತ್ತಿದೆ. ಉತ್ತಮವಾದ ಮಳೆಯಾದರೆ ಮುಂದಿನ ಹದಿನೈದು ದಿನಗಳಲ್ಲಿ ಹಣ್ಣಿನ ಬೆಲೆಯು ಇಳಿಕೆಯಾಗುವ ಸಾಧ್ಯತೆಯಿದೆ~
-ಸಿ.ಎನ್.ರೆಡ್ಡಿ
ಸಹಾಯಕ ಕಾರ್ಯದರ್ಶಿ,ಹಣ್ಣು ಮತ್ತು ತರಕಾರಿ ಮಾರುಕಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.