ADVERTISEMENT

ತಾಂತ್ರಿಕ ದೋಷ: ಅರ್ಧದಲ್ಲೇ ನಿಂತ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 7 ಮೇ 2018, 20:00 IST
Last Updated 7 ಮೇ 2018, 20:00 IST
ಬೈಯಪ್ಪನಹಳ್ಳಿ ಬಳಿ ಎತ್ತರಿಸಿದ ಮಾರ್ಗದಲ್ಲಿ ತಾಂತ್ರಿಕ ದೋಷದಿಂದಾಗಿ ಅರ್ಧದಲ್ಲೇ ನಿಂತ ಮೆಟ್ರೊ ರೈಲಿನಿಂದ ಇಳಿದ ಪ್ರಯಾಣಿಕರು ಹಳಿಗಳ ಪಕ್ಕದ ಕಿರುದಾರಿಯಲ್ಲಿ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದರು
ಬೈಯಪ್ಪನಹಳ್ಳಿ ಬಳಿ ಎತ್ತರಿಸಿದ ಮಾರ್ಗದಲ್ಲಿ ತಾಂತ್ರಿಕ ದೋಷದಿಂದಾಗಿ ಅರ್ಧದಲ್ಲೇ ನಿಂತ ಮೆಟ್ರೊ ರೈಲಿನಿಂದ ಇಳಿದ ಪ್ರಯಾಣಿಕರು ಹಳಿಗಳ ಪಕ್ಕದ ಕಿರುದಾರಿಯಲ್ಲಿ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದರು   

ಬೆಂಗಳೂರು: ‘ನಮ್ಮ ಮೆಟ್ರೊ’ ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಮೆಟ್ರೊ ರೈಲು ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ದಿಢೀರ್‌ ನಿಂತಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಇದರಿಂದಾಗಿ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಬೆಳಿಗ್ಗೆ 10.18 ಗಂಟೆಯಿಂದ 10.57ರ ನಡುವೆ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ರೈಲಿನಲ್ಲಿದ್ದ ಸುಮಾರು 150ಕ್ಕೂ ಅಧಿಕ ಪ್ರಯಾಣಿಕರನ್ನು ಎತ್ತರಿಸಿದ ಮಾರ್ಗದ ಮಧ್ಯೆಯೇ ರೈಲಿನಿಂದ ಕೆಳಗೆ ಇಳಿಸಲಾಯಿತು. ಸುಮಾರು 500 ಮೀಟರ್‌ಗಳಷ್ಟು ದೂರದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಅವರು ಹಳಿಗಳ ಪಕ್ಕದ ಕಿರುದಾರಿಯಲ್ಲಿ ನಡೆದುಕೊಂಡೇ ಸಾಗಬೇಕಾಯಿತು.

ADVERTISEMENT

‘ಬೈಯಪ್ಪನಹಳ್ಳಿ ನಿಲ್ದಾಣದ ಪ್ರವೇಶದ ಬಳಿ ರೈಲು ಚಲಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಸಿಗ್ನಲಿಂಗ್‌ ವ್ಯವಸ್ಥೆಯನ್ನು ಸರಿಪಡಿಸಿದ ನಂತರವೇ ರೈಲನ್ನು ಮುಂದಕ್ಕೆ ಕೊಂಡೊಯ್ಯಬೇಕಾಯಿತು. ಹಾಗಾಗಿ ಸುಮಾರು 40 ನಿಮಿಷ ರೈಲು ನಿಂತಲ್ಲೇ ನಿಂತಿತು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದರು.

ರೈಲು ಒಂದು ಹಳಿಯಿಂದ ಇನ್ನೊಂದು ಹಳಿಗೆ ಮಾರ್ಗ ಬದಲಾವಣೆ ಮಾಡಲು ನೆರವಾಗುವ ಪಾಯಿಂಟ್‌ ಮೆಷೀನ್‌ನಲ್ಲಿ ದೋಷ ಕಾಣಿಸಿಕೊಂಡಿದ್ದೇ ಈ ಸಮಸ್ಯೆಗೆ ಕಾರಣ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಇಂದಿರಾನಗರ ನಿಲ್ದಾಣದಿಂದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದ ಮೂಲಕ ಮೈಸೂರು ರಸ್ತೆ ನಿಲ್ದಾಣದವರೆಗೆ ಶಾರ್ಟ್‌ಲೂಪ್‌ ವ್ಯವಸ್ಥೆ ಮೂಲಕ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಪ್ರಯಾಣಿಕರ ದಟ್ಟಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಪ್ರಯಾಣಿಕರು ಖರೀದಿಸಿದ್ದ 16 ಟೋಕನ್‌ಗಳ ಸಂಬಂಧ ₹ 340 ಹಿಂಪಾವತಿ ಮಾಡಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಜೈನ್‌ ಹೇಳಿದರು.

ಇಆರ್‌ಟಿ ಸಿಬ್ಬಂದಿ ಬಳಕೆ?

ಬೈಯಪ್ಪನಹಳ್ಳಿ ನಿಲ್ದಾಣದ ನಿಯಂತ್ರಣ ಕೊಠಡಿ ನಿರ್ವಹಣೆಗೆ ತುರ್ತುಸ್ಪಂದನಾ ತಂಡದ (ಇಆರ್‌ಟಿ) ಸಿಬ್ಬಂದಿಯನ್ನು ಬಳಸಿದ್ದೇ ಈ ಸಮಸ್ಯೆಗೆ ಕಾರಣವಾಯಿತೇ?

ಹೌದು ಎನ್ನುತ್ತವೆ ಬಿಎಂಆರ್‌ಸಿಎಲ್‌ ಮೂಲಗಳು.

‘ಬೈಯಪ್ಪನಹಳ್ಳಿಯ ನಿಯಂತ್ರಣ ಕೊಠಡಿಯನ್ನು ನುರಿತ ಸಿಬ್ಬಂದಿಯೇ ನಿರ್ವಹಿಸುತ್ತಿದ್ದರು. ಆದರೆ, ಕೆಲವು ತಿಂಗಳುಗಳಿಂದ ಇದರ ನಿರ್ವಹಣೆಗೆ ಆಗಾಗ ಇಆರ್‌ಟಿ ಸಿಬ್ಬಂದಿಯನ್ನು ಬಳಸುತ್ತಿದ್ದಾರೆ. ಅವರಿಗೆ ತಾಂತ್ರಿಕ ಪರಿಣತಿ ಸಾಲದು. ಸೋಮವಾರವೂ ಇಆರ್‌ಟಿ ಸಿಬ್ಬಂದಿಯೇ ಈ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಪಾಯಿಂಟ್‌ ಮೆಷೀನ್‌ನಲ್ಲಿ ಕಾಣಿಸಿಕೊಂಡ ದೋಷವನ್ನು ಸಮರ್ಥವಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗದೇ ಇದ್ದುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎತ್ತರಿಸಿದ ಮಾರ್ಗದಲ್ಲಿ ರೈಲು ನಿಂತಿದ್ದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಒಂದು ವೇಳೆ, ಸುರಂಗ ಮಾರ್ಗದೊಳಗೆ ರೈಲು ಸಿಲುಕಿಕೊಳ್ಳುತ್ತಿದ್ದರೆ ಪ್ರಯಾಣಿಕರು ಉಸಿರಾಟದ ತೊಂದರೆ ಎದುರಿಸಬೇಕಾಗಿ ಬರುತ್ತಿತ್ತು’ ಎಂದರು.

‘ನೌಕರರು ಮುಷ್ಕರ ನಡೆಸಿದಾಗ ರೈಲು ಸೇವೆ ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ನಿಗಮವು ಇಆರ್‌ಟಿಯನ್ನು ರೂಪಿಸಿದೆ. ಇದನ್ನು ತಪ್ಪು ಎಂದು ಹೇಳುತ್ತಿಲ್ಲ. ಆದರೆ, ಅವರಿಗೆ ತರಬೇತಿ ನೀಡುವ ಸಲುವಾಗಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.