ADVERTISEMENT

ತಿಮ್ಮಕ್ಕ ಸಾವಿನ ವದಂತಿ; ಚಾಲಕ ಸೆರೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 20:01 IST
Last Updated 29 ಮೇ 2018, 20:01 IST
ಪ್ರದೀಪ್‌ ಗೌಡ
ಪ್ರದೀಪ್‌ ಗೌಡ   

ಬೆಂಗಳೂರು: ‘ಸಾಲುಮರದ ತಿಮ್ಮಕ್ಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ’ ಎಂದು ವದಂತಿ ಹಬ್ಬಿಸಿದ್ದ ಆರೋಪದಡಿ ಪ್ರದೀಪ್ ಗೌಡ (26) ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಹರದನಹಳ್ಳಿ ನಿವಾಸಿಯಾದ ಆರೋಪಿ, ಬ್ಯಾಡರಹಳ್ಳಿಯ ಬಾಲಾಜಿ ಬಡಾವಣೆಯಲ್ಲಿ ವಾಸವಿದ್ದ. ಓಲಾ ಹಾಗೂ ಉಬರ್‌ ಕಂಪನಿಯಡಿ ಕ್ಯಾಬ್ ಓಡಿಸುತ್ತಿದ್ದ.

ತಿಮ್ಮಕ್ಕ ಅವರ ಮಗ ಉಮೇಶ್, ಮೇ 24ರಂದು ನೀಡಿದ್ದ ದೂರಿನನ್ವಯ ಆರೋಪಿ ಬಂಧಿಸಿದ್ದೇವೆ. ಜಾಮೀನು ಮೇಲೆ ಬಿಡುಗಡೆ ಮಾಡಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಸತೀಶ್ ಕುಮಾರ್ ತಿಳಿಸಿದ್ದಾರೆ.

ADVERTISEMENT

'ಸ್ನೇಹ ಲೋಕ‘ ಹೆಸರಿನ ಫೇಸ್‌ಬುಕ್‌ ಗ್ರೂಪ್‌ನಲ್ಲಿ ‘ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ’ ಎಂಬ ಪೋಸ್ಟ್‌ ಪ್ರಕಟಿಸಲಾಗಿತ್ತು. ಅದರ ಜತೆಗೆ ಫೋಟೊಶಾಪ್‌ ಸಾಫ್ಟ್‌ವೇರ್‌ನಲ್ಲಿ ಎಡಿಟ್‌ ಮಾಡಿದ್ದ ತಿಮ್ಮಕ್ಕ ಅವರ ಭಾವಚಿತ್ರವೂ ಇತ್ತು. ಈ ಪೋಸ್ಟ್‌ ವೈರಲ್‌ ಆಗಿತ್ತು. ಬಳಿಕವೇ ತಿಮ್ಮಕ್ಕ ಅವರ ಜತೆಗೆ ಬಂದು ಉಮೇಶ್‌ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ಆರೋಪಿ ಪ್ರದೀಪ್‌ ಗೌಡ, ‘ಮನಸುಗಳ ಮಾತು ಮಧುರ’ ಗ್ರೂಪ್‌ನಲ್ಲಿದ್ದ ‘ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ’ ಎಂಬ ಪೋಸ್ಟ್‌ ಅನ್ನು ‘ಸ್ನೇಹಲೋಕ’ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದ. ನಂತರ, ಹಲವರು ಅದನ್ನು ಪರಸ್ಪರ ವರ್ಗಾಯಿಸಿದ್ದರು.

ಈ ಪೋಸ್ಟ್‌ ರಚಿಸಿದ್ದ ಮೂಲ ವ್ಯಕ್ತಿಯ ಬಗ್ಗೆ ಮಾಹಿತಿ ಇದೆ. ಸದ್ಯದಲ್ಲೇ ವಶಕ್ಕೆ ಪಡೆಯಲಿದ್ದೇವೆ. ಗ್ರೂಪ್‌ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಿ
ದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.