ADVERTISEMENT

ತಿರುಪತಿಯಲ್ಲಿ 500 ಕೊಠಡಿ ಅತಿಥಿ ಗೃಹ: ಕೃಷ್ಣಯ್ಯ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:35 IST
Last Updated 18 ಫೆಬ್ರುವರಿ 2012, 19:35 IST

ಬೆಂಗಳೂರು: ತಿರುಪತಿಯಲ್ಲಿ 500 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದನ್ನು ತೆರವುಗೊಳಿಸಿದ ನಂತರ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯಶೆಟ್ಟಿ ವಿವರಿಸಿದರು.

ತಿರುಪತಿಯಲ್ಲಿ ರಾಜ್ಯ ಸರ್ಕಾರದ್ದೇ ಏಳು ಎಕರೆ ಜಾಗ ಇದೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಹೈಕೋರ್ಟ್‌ಗೆ ಒದಗಿಸಲಾಗಿದೆ ಎಂದು ಹೇಳಿದರು.

ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ 500 ಕೊಠಡಿಗಳನ್ನು ನಿರ್ಮಿಸಲು ನಿರ್ಧರಿಸಿ, ಶಂಕುಸ್ಥಾಪಿಸಲಾಗಿತ್ತು. ಎಲ್ಲ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 15 ಲಕ್ಷ ರೂ. ನೀಡಿದ್ದಾರೆ. ಹಣದ ಸಮಸ್ಯೆ ಇಲ್ಲ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಸಚಿವ ಸ್ಥಾನ ಕೇಳಲ್ಲ: `ಸಚಿವ ಸ್ಥಾನಕ್ಕೆ ಯಾವ ಲಾಬಿಯೂ ಮಾಡುವುದಿಲ್ಲ. ನಮ್ಮದು ಪ್ರಬಲ ಜಾತಿಯಲ್ಲ. ಹೀಗಾಗಿ ಸಚಿವ ಸ್ಥಾನ ಕೇಳುವುದಕ್ಕೂ ಹೋಗುವುದಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

500 ಕೋಟಿ ಬಾಡಿಗೆ: ಬೆಂಗಳೂರು ನಗರದ ವಿವಿಧ ಮುಜರಾಯಿ ದೇವಸ್ಥಾನಗಳ ವಶದಲ್ಲಿರುವ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ತಿಂಗಳಿಗೆ ಕನಿಷ್ಠ 50 ಕೋಟಿ ರೂ. ಬಾಡಿಗೆ ಬರುತ್ತದೆ. ಈ ಉದ್ದೇಶದಿಂದ ಹಮ್ಮಿಕೊಂಡಿದ್ದ ಯೋಜನೆಗೆ ಹಣಕಾಸು ಇಲಾಖೆ ಇನ್ನೂ ಒಪ್ಪಿಗೆ ನೀಡಿಲ್ಲ. ವರ್ಷಕ್ಕೆ ಅಂದಾಜು 500 ಕೋಟಿ ರೂ. ಆದಾಯ ಈ ಮೂಲದಿಂದ ನಿರೀಕ್ಷಿಸಬಹುದು ಎಂದರು.

ಬಾರಿಯೂ ಗಂಗಾಜಲ ವಿತರಣೆ
ಬೆಂಗಳೂರು: ಶಿವರಾತ್ರಿ ಪ್ರಯುಕ್ತ ರಾಜ್ಯದ  ಎಲ್ಲ ದೇವಾಲಯಗಳಲ್ಲಿ ಪವಿತ್ರ ಗಂಗಾಜಲ ವಿತರಣೆ ಆಗಲಿದೆ. ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯಶೆಟ್ಟಿ ಸತತ ನಾಲ್ಕನೇ ವರ್ಷವೂ ಗಂಗಾಜಲವನ್ನು ಹಂಚಲು ಸಿದ್ಧತೆ ಮಾಡಿದ್ದಾರೆ.

`ಹರಿದ್ವಾರ ಸಮೀಪದ ಬ್ರಹ್ಮಕುಂಡದಲ್ಲಿ ಸಂಗ್ರಹಿಸಿದ ಗಂಗಾಜಲವನ್ನು ಎರಡು ಟ್ಯಾಂಕರ್‌ಗಳ ಮೂಲಕ ನಗರಕ್ಕೆ ತರಲಾಗಿದೆ. ಭಾನುವಾರ (ಫೆ.19) ಬೆಳಿಗ್ಗೆ 11.30ಕ್ಕೆ ಚಾಮರಾಜಪೇಟೆಯ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗಂಗಾಜಲ ವಿತರಣೆ ಮಾಡಲಾಗುವುದು~ ಎಂದು ಕೃಷ್ಣಯ್ಯಶೆಟ್ಟಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT