ADVERTISEMENT

ತೆರಿಗೆ ಪಾವತಿಸದ 160 ಆಸ್ತಿದಾರರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ವಿವಿಧ ಸರ್ಕಾರಿ ಕಟ್ಟಡಗಳು, ಖಾಸಗಿ ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸುಮಾರು 160 ಪ್ರಮುಖ ಆಸ್ತಿದಾರರ ಪಟ್ಟಿಯನ್ನು ಬಿಬಿಎಂಪಿಯು ಬುಧವಾರ ಬಿಡುಗಡೆ ಮಾಡಿದೆ.

ಪಾಲಿಕೆಯು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಅಳವಡಿಸಿದ್ದರೂ ಆಸ್ತಿ ತೆರಿಗೆಯು ಸೋರಿಕೆಯಾಗುತ್ತಿದ್ದು,  ಪ್ರತಿ ವಲಯದಿಂದ ದೊಡ್ಡ ಮೊತ್ತದ ಆಸ್ತಿ ತೆರಿಗೆ ಪಾವತಿಸಬೇಕಿರುವ ಇಪ್ಪತ್ತು ಮಂದಿಯನ್ನು ಗುರುತಿಸಿದ್ದು, ಆಸ್ತಿ ತೆರಿಗೆಯಿಂದ ಒಟ್ಟು 161.83 ಕೋಟಿ ರೂಪಾಯಿ ಸಂಗ್ರಹಗೊಳ್ಳಬೇಕಿದೆ.

ಹಲವು ಸಂಸ್ಥೆಗಳು ಬಹುಕೋಟಿ ಮೊತ್ತದ ಆಸ್ತಿ ತೆರಿಗೆಯನ್ನು ಉಳಿಸಿಕೊಂಡಿದ್ದು, ಅವುಗಳ ಹೆಸರು ಕೆಳಗಿನಂತಿವೆ. (ಅಂಕಿಗಳು ಕೋಟಿ ರೂಪಾಯಿಗಳಲ್ಲಿದೆ) ಹಿಂದೂಸ್ತಾನ್ ಏರೋನಾಟಿಕಲ್ಸ್ (25.09), ಐಟಿಐ (10.62 ) ಎಚ್‌ಎಂಟಿ  (14), ಕರ್ನಾಟಕ ಲೀಸಿಂಗ್ ಕಮರ್ಷಿಯಲ್ ಕಾರ್ಪೋರೇಷನ್ (5.5),  ಪ್ರೆಸ್ಟೀಜ್

ಗಾರ್ಡನ್ ಕನ್‌ಸ್ಟ್ರಕ್ಷನ್  (7.79 ), ಆರ್‌ಎಂಝಡ್ ಇಕೋ ಸ್ಪೇಸ್ (7.73 ), ಕಂಟೈನರ್ ಕಾರ್ಪೋರೇಷನ್ ಆಫ್ ಇಂಡಿಯಾ (5.54 ), ಆದರ್ಶ ಪ್ರೈಂ ಪ್ರಾಜೆಕ್ಟ್,  (3.97), ಸಲಾರ್‌ಪುರಿಯಾ ಟಚ್ ಸ್ಟೋನ್ (3.14), ವಿಪ್ರೊ ಲಿಮಿಟೆಡ್ (3.06), ಲೋಕೋಪಯೋಗಿ ವಸತಿ ಗೃಹ (2.69), ಸ್ವಾಗತ ಗರುಡ ಮಾಲ್‌ನ ಎನ್.ಎ.ಕೃಷ್ಣ ರೆಡ್ಡಿ (4.02) ದಯಾನಂದ ಸಾಗರ ಕಾಲೇಜು (3.52), ಅಭಿಷೇಕ್ ಡೆವಲಪರ್ಸ್‌ (6.69), ಬಿಗ್‌ಬಜಾರ್-ಮಲ್ಲೇಶ್ವರ

(3.34), ಡಿ.ಮಾಣಿಕ್‌ಚಂದ್ (2.47) ರಜತ ಎಂಟರ್‌ಪ್ರೈಸಸ್ (1.08) ವೈದೇಹಿ ಆಸ್ಪತ್ರೆ ( 2.5), ಸವನ್ನಾ ಹೋಟೆಲ್ (2.41) ಅರ್ಬನ್ ಎಡ್ಜ್ ಹೊಟೇಲ್, ವೃಂದಾವನ ಟೆಕ್ ವಿಲೇಜ್, ಸೆಂಟರ್ ಪಾಂಯಿಟ್ ರಿಯಾಲಿಟಿ, ಸಿಗ್ಮಾ ಟೆಕ್ ಪಾರ್ಕ್, ಬಿಪಿಎಲ್ ಇಂಡಿಯಾ, ಬಿಐಪಿ ಡೆವಲಪರ್ಸ್‌, ಸಫೈರ್ ಪ್ರಿ-ವೆಂಚರ್, ಎಂ.ವಸಂತಕುಮಾರಿ,
ಎಂ.ಆರ್.ಕೋದಂಡರಾಮ, ಜಿಮಿನಿ ಡೈಯಿಂಗ್ ಅಂಡ್ ಪ್ರಿಟಿಂಗ್, ವಿಮಾನ ನಿಲ್ದಾಣ ಪ್ರಾಧಿಕಾರ, ಗೋಕುಲ ಎಜುಕೇಷನ್ ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ಕೋಟಿಗಟ್ಟಲೆ ತೆರಿಗೆ ಉಳಿಸಿಕೊಂಡಿವೆ. ಆಸ್ತಿದಾರರಿಗೆ ನೋಟಿಸ್ ನೀಡಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದುಪಾಲಿಕೆಯ  ಪ್ರಕಟಣೆ ತಿಳಿಸಿದೆ.

`ಕುಡಿಯುವ ನೀರು ಪೂರೈಕೆಗೆ ಒತ್ತಡ~

ಬೆಂಗಳೂರು: `ರಾಜ್ಯದಲ್ಲಿ ಬೆಂಗಳೂರು ಮಹಾನಗರವಾಗಿರುವುದರಿಂದ ಇಲ್ಲಿಗೆ ಹರಿದು ಬರುವ ಜನಸಂಖ್ಯೆಯ ಪ್ರಮಾಣ ಹೆಚ್ಚಿಗಿದ್ದು, ಕುಡಿಯುವ ನೀರಿನ ಪೂರೈಕೆ ಮೇಲೆ ಒತ್ತಡ ಹೆಚ್ಚಾಗಿದೆ~ ಎಂದು ಮುಖ್ಯಮಂತ್ರಿಯ ಸಲಹೆಗಾರ ಎ.ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಜಲಮಂಡಲಿಯು ನಗರದಲ್ಲಿ ಆಯೋಜಿಸಿರುವ ನೀರಿನ ಸಂಸ್ಕರಣೆ ಮತ್ತು ಪುನರ್‌ಬಳಕೆಯ ಮೂಲಕ ನೀರಿನ ಪರ್ಯಾಯ ಮೂಲಗಳನ್ನು ಕಲ್ಪಿಸುವ ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ನಗರಕ್ಕೆ ಹರಿದು ಬರುತ್ತಿರುವ ಜನಸಂಖ್ಯೆಯ ಪ್ರಮಾಣವು ಹೆಚ್ಚಾಗಿದ್ದು, ನೀರು ಪೂರೈಕೆಯಂತಹ ಮೂಲ ಸೌಕರ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಾಗುತ್ತಿದೆ~ ಎಂದರು. `ಈ ದಿಸೆಯಲ್ಲಿ ನೀರಿನ ಸಂರಕ್ಷಣೆ, ಪುನರ್‌ಬಳಕೆ ಮುಂತಾದವುಗಳನ್ನು ವ್ಯವಸ್ಥಿತವಾಗಿ ಕಾಲಮಿತಿಯಲ್ಲಿ ಕೈಗೊಳ್ಳಬೇಕು. ಮಳೆ ನೀರು ಸಂಗ್ರಹಣೆ ಮತ್ತು ಸಂಸ್ಕರಿಸಿದ ನೀರಿನ ಬಳಕೆ ಮಾಡುವಂತೆ ಕಡ್ಡಾಯಗೊಳಿಸಬೇಕು.

ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು~ ಎಂದು ಹೇಳಿದರು. ಎರಡು ದಿನಗಳು ನಡೆದ ಕಾರ್ಯಾಗಾರದಲ್ಲಿ ಸಮರ್ಥ ನೀರು ಪೂರೈಕೆ ವ್ಯವಸ್ಥೆ, ಸೋರಿಕೆ ನಿಯಂತ್ರಣ, ಸಮಗ್ರ ನೀರು ನಿರ್ವಹಣೆ, ಮಳೆ ನೀರು ಸಂರಕ್ಷಣೆ, ಸಂಸ್ಕರಿಸಿದ ತ್ಯಾಜ್ಯ ನೀರಿನ ಪುನರ್ ಬಳಕೆ ಕುರಿತು ಚರ್ಚಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.