ADVERTISEMENT

`ತೇಜಸ್ವಿ ಕಂಡ ಕೀಟ ಪ್ರಪಂಚ' ಅನಾವರಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:40 IST
Last Updated 8 ಏಪ್ರಿಲ್ 2013, 19:40 IST

ಬೆಂಗಳೂರು:  ಗೆದ್ದಲುಗಳು ನಿದ್ದೆ ಮಾಡುವುದಿಲ್ಲ. ದಿನದ 24 ಗಂಟೆಗಳ ಕಾಲ ಕೆಲಸ ಮಾಡುವುದೊಂದೇ ಚಟ. ಗೆದ್ದಲು ರಾಣಿ ಸರಿ ಸುಮಾರು 45 ವರ್ಷಗಳ ಕಾಲ ದೀರ್ಘ ಆಯಸ್ಸು ಪಡೆದಿದೆ. ರೈತರ ಮಿತ್ರರಾದ ಎಲ್ಲ ಗೆದ್ದಲುಕೀಟಗಳ ಒಟ್ಟು ತೂಕ ಮನುಷ್ಯ ತೂಕಕ್ಕೆ ಸಮ!

ಗೆದ್ದಲು ಮಾತ್ರವಲ್ಲ ಕಾಡಿನಲ್ಲಿ ಅಲೆದಾಡುವ ಅಪರೂಪದ ಬೆಳದಿಂಗಳ ಚಿಟ್ಟೆ, ಹುಲಿ ಪತಂಗ, ಕಾಗೆ ಚಿಟ್ಟೆ, ರೆಡ್ ಹೆಲನ್ ಚಿಟ್ಟೆಗಳು, ಸೊಳ್ಳೆ, ಜೇನು, ತಿಗಣೆ, ಇರುವೆ ಸೇರಿದಂತೆ ತರಹೇವಾರಿ ಕೀಟಗಳ ಜಗತ್ತು ವಿಜಯನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣ ದಲ್ಲಿ ಅನಾವರಣಗೊಂಡಿದೆ. ಅಲ್ಲದೇ ಕಂಡು ಕೇಳರಿಯದ ಅನೂಹ್ಯ ಕೀಟ ಜಗತ್ತಿನ ಕುರಿತ ಅಸಂಖ್ಯಾತ ಮಾಹಿತಿ `ತೇಜಸ್ವಿ ಕಂಡ ಕೀಟ ಪ್ರಪಂಚ'ದಲ್ಲಿ ಸೋಮವಾರ ಪ್ರದರ್ಶನ ಗೊಂಡಿತು.

ಪೂರ್ಣಚಂದ್ರ ತೇಜಸ್ವಿ ಮಲೆನಾಡ ಪರಿಸರದಲ್ಲಿ ಕಂಡುಕೊಂಡ ನೂರಾರು ಕೀಟಗಳು ಹಾಗೂ ಅವುಗಳ ಕುರಿತ ಮಾಹಿತಿಯನ್ನು ಮೂಡಿಗೆರೆಯ ತೋಟಗಾರಿಕಾ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹ ಯೋಗದೊಂದಿಗೆ ಪ್ರದರ್ಶಿಸ ಲಾಯಿತು. 1 ರಿಂದ 13 ವರ್ಷದವರೆಗೆ ಬದುಕುಳಿಯುವ ಕಿರ್-ಕಿರ್ ಗಂಡು ಹುಳುಗಳು, ಆಹಾರವಿಲ್ಲದೇ ವರ್ಷಗಳ ಕಾಲ ಬದುಕುವ ಇರುವೆಗಳು, ಸೂಜಿಯ ರಂಧ್ರದಲ್ಲಿ ಕೂಡ ಸುಲಭವಾಗಿ ತೂರಬಲ್ಲ ಜಗತ್ತಿನ ಅತಿ ಸಣ್ಣ ಕೀಟ `ಮೈಮೆರಿಡ್ ಕಣಜ' , ಬಗೆಯ ಬಗೆಯ ಜಿರಲೆಗಳು, ಡೆಂಗೆ, ಚಿಕೂನ್‌ಗುನ್ಯಾ ಕಾಯಿಲೆಗೆ ಕಾರಣವಾಗುವ ಈಡಿಪಸ್ ಸೊಳ್ಳೆಗಳನ್ನು ಸಾಲು ಸಾಲಾದ ಬಾಟಲಿಗಳಲ್ಲಿ  ಶೇಖರಿಸಿಡಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಬಿ.ಎಲ್.ಭಾಗ್ಯಲಕ್ಷ್ಮಿ, `ಮಲೆನಾಡಿನ ಕಾಡಿನ ಮಧ್ಯೆ ಉಳಿದುಕೊಂಡು ಪ್ರಾಣಿ ಹಾಗೂ ಪಕ್ಷಿ ಸಂಕುಲದ ವಿಸ್ಮಯಗಳ ಕುರಿತು ಜಗತ್ತಿಗೆ ತಿಳಿಸಿದ ಮಹಾನ್ ಪ್ರತಿಭೆ ತೇಜಸ್ವಿ. ಪರಿಸರದೆಡಗಿನ ಕಾಳಜಿ ಮತ್ತು ಸರಳ ಶೈಲಿಯ ಬರವಣಿಗೆ ಯಿಂದ ಎಲ್ಲ ವರ್ಗದ ಓದುಗರನ್ನು ತೇಜಸ್ವಿ ಅವರ ಕೃತಿಗಳು ಸೆಳೆ ಯುತ್ತದೆ' ಎಂದು ತಿಳಿಸಿದರು.

`ತೇಜಸ್ವಿ ಅವರ `ಮಲೆನಾಡಿಗೆ ಬಾ' ಕೃತಿಯನ್ನು ಪಠ್ಯವಾಗಿಸುವ ಬಗ್ಗೆ ಆಸ್ಥೆ ವಹಿಸುವ ಅಗತ್ಯವಿದೆ. ಅತಿ ಗಂಭೀರ ವಿಷಯವನ್ನು ಸರಳವಾಗಿ ನಿರೂಪಿ ಸಿರುವುದರಿಂದ ಈ ಕೃತಿಗಳನ್ನು ಓದುವ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮೂಡಲು ಸಾಧ್ಯವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

ಕೀಟ ಜಗತ್ತಿನ ಪ್ರದರ್ಶನವೂ ಮಂಗಳವಾರವೂ ನಡೆಯಲಿದೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮುತ್ತುರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.