ADVERTISEMENT

ದಲಿತರು ಸಂಘಟಿತರಾಗದೆ ಅಭಿವೃದ್ಧಿ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: `ದಲಿತರು ರಾಜಕೀಯವಾಗಿ ಸಂಘಟಿತರಾಗದೆ ಹೋದರೆ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ~ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪದವೀಧರರ ಒಕ್ಕೂಟವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ದಲಿತ ಮೀಸಲಾತಿ ಮತ್ತು ಮಹಿಳಾ ಮೀಸಲಾತಿ ಸಮರ್ಪಕವಾಗಿ ಜಾರಿಯಾಗದೆ ಇರುವುದರ ಬಗ್ಗೆ ದಲಿತರು ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಎಡ, ಬಲ ಎಂಬ ಪಂಥವಿಲ್ಲದೇ ದಲಿತರೆಲ್ಲರೂ ಒಂದಾಗಿ ಹೋರಾಡಬೇಕು~ ಎಂದು ಕರೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, `ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ದಲಿತರ ವಿರುದ್ಧ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಸಮರ್ಥವಾಗಿ ವಿರೋಧಿಸುವುದನ್ನು ಬಿಟ್ಟು ದಲಿತರೆಲ್ಲರೂ ವಿವಿಧ ವರ್ಗಗಳಾಗಿ ಹಂಚಿಹೋಗಿರುವುದು ಬೇಸರ ಮೂಡಿಸಿದೆ~ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ, ಮಾಜಿ ಸಚಿವ ಬಿ.ಸೋಮಶೇಖರ್, ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಪ್ರೊ.ಎನ್.ರಂಗಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ, ರಂಗಕರ್ಮಿ ತೊಟ್ಟವಾಡಿ ನಂಜುಂಡಸ್ವಾಮಿ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.