ADVERTISEMENT

ದುಂಡುಪಾಳ್ಯ ಗ್ಯಾಂಗ್‌ ವಿರುದ್ಧದ ಪ್ರಕರಣ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ದುಂಡುಪಾಳ್ಯ ಗ್ಯಾಂಗ್‌ ವಿರುದ್ಧದ ಪ್ರಕರಣ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ದುಂಡುಪಾಳ್ಯ ಗ್ಯಾಂಗ್‌ ವಿರುದ್ಧದ ಪ್ರಕರಣ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ   

ಬೆಂಗಳೂರು: ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ನಿವಾಸಿ ಗೀತಾ ಎಂಬುವರನ್ನು ಹತ್ಯೆಗೈದು ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ದಂಡುಪಾಳ್ಯ ಗ್ಯಾಂಗ್‌ ಸದಸ್ಯರ ವಿರುದ್ಧ ಮರು ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಪ್ರಕರಣದ ತೀರ್ಪನ್ನು ನ. 9ಕ್ಕೆ ಕಾಯ್ದಿರಿಸಿದೆ.

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ನ್ಯಾಯಾಲಯದಲ್ಲಿ ಗುರುವಾರ ಅಂತಿಮ ವಿಚಾರಣೆ ನಡೆಯಿತು. ಆರೋಪಿಗಳ ಪರ ವಕೀಲರು, ‘ನನ್ನ ಕಕ್ಷಿದಾರರು ಅಮಾಯಕರು ಅವರನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಸ್‌.ಪಾಟೀಲ, ‘ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ನವೆಂಬರ್‌ 9ಕ್ಕೆ ವಿಚಾರಣೆಯನ್ನು ಮುಂದೂಡಿ ಅಂದೇ ತೀರ್ಪು ಪ್ರಕಟಿಸುವುದಾಗಿ ಹೇಳಿದರು.

ADVERTISEMENT

ಏನಿದು ಪ್ರಕರಣ: 2000ರ ಜುಲೈ 4ರಂದು ನೀರು ಕೇಳುವ ನೆಪದಲ್ಲಿ ಗೀತಾ ಅವರ ಮನೆಗೆ ಗ್ಯಾಂಗ್‌ನ ಸದಸ್ಯರಾದ ದೊಡ್ಡ ಹನುಮ, ವೆಂಕಟೇಶ್‌, ಮುನಿಕೃಷ್ಣ, ನಲ್ಲತಿಮ್ಮ ಹಾಗೂ ಲಕ್ಷ್ಮಮ್ಮ ನುಗ್ಗಿದ್ದರು.

ಗೀತಾ ಅವರನ್ನು ಕೊಲೆ ಮಾಡಿ, ಆಭರಣಗಳನ್ನು ಸುಲಿಗೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ 17 ಚಿನ್ನದ ಆಭರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.