ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಇದೇ ಬುಧವಾರ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸುವ ಸಂಬಂಧ ಈ ಸಭೆ ಕರೆಯಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ 14 ಮಂದಿ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವರು.
ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಕೂಡ ಸಭೆಯಲ್ಲಿ ಭಾಗವಹಿಸುವರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಮಿಸ್ತ್ರಿ ಸಭೆ ಕರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಕ್ಕಲಿಗ ಶಾಸಕರು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಕೆಪಿಸಿಸಿ ನಾಯಕತ್ವ ನೀಡುವಂತೆ ಒತ್ತಡ ಹೇರಲು ಸಜ್ಜಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಪರಮೇಶ್ವರ್ ಅವರನ್ನು ಕೆಳಗಿಳಿಸಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಈ ಹುದ್ದೆ ನೀಡುವಂತೆ ಲಿಂಗಾಯತ ಮುಖಂಡರು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಸಭೆ ನಿಗದಿಯಾಗಿದೆ.
ಬೆಂಬಲ ಗಳಿಸಲು ಕಸರತ್ತು: ಶಾಮನೂರು ಶಿವಶಂಕರಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಡ ಹೇರಲು ತಿಂಗಳ ಅಂತ್ಯದೊಳಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಲಿಂಗಾಯತ ಶಾಸಕರು ಮತ್ತು ಮುಖಂಡರ ಗುಂಪು ಸಜ್ಜಾಗಿದೆ. ಸೋನಿಯಾ ಭೇಟಿಗೂ ಮುನ್ನ ಪಕ್ಷದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತ ಮುಖಂಡರ ಬೆಂಬಲ ಗಳಿಸುವ ಕಸರತ್ತಿಗೆ ಈ ಗುಂಪು ಕೈಹಾಕಿದೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಅವರಿಗೆ ಸಲ್ಲಿಸಲು ಉದ್ದೇಶಿಸಿರುವ ಮನವಿಯಲ್ಲಿ ಪರಮೇಶ್ವರ್ ಬದಲಾವಣೆ ಬೇಡಿಕೆಗೆ ಸ್ಪಷ್ಟವಾದ ಕಾರಣಗಳನ್ನು ಉಲ್ಲೇಖಿಸಲು ಶಾಮನೂರು ಬೆಂಬಲಿಗರು ತೀರ್ಮಾನಿಸಿದ್ದಾರೆ. ಲಿಂಗಾಯತರು ಅಧ್ಯಕ್ಷರಾದರೆ ಮಾತ್ರ ಸಂಪೂರ್ಣ ಬಹುಮತ ಗಳಿಸಬಹುದು.
ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ ಲಿಂಗಾಯತರೇ ಕೆಪಿಸಿಸಿ ನಾಯಕತ್ವ ವಹಿಸಬೇಕು ಎಂಬ ವಾದವನ್ನೂ ಈ ಬಣ ಮುಂದಿಡಲಿದೆ ಎಂದು ತಿಳಿದುಬಂದಿದೆ.ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಶಿವಶಂಕರಪ್ಪ, `ಪಕ್ಷವು ಪಶ್ಚಾತ್ತಾಪಪಡುವ ಮುನ್ನವೇ ಒಂದು ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.