ADVERTISEMENT

ದೇವಸ್ಥಾನದಲ್ಲಿ ಕಳವು: ಬಂಧನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:10 IST
Last Updated 21 ಏಪ್ರಿಲ್ 2012, 19:10 IST

ಬೆಂಗಳೂರು:  ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು ಹದಿಮೂರು ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಆರೋಪಿಗಳಿಂದ ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದವರಾದ ಮಂಜುನಾಥ (28), ರವಿಕುಮಾರ್ (25) ಹಾಗೂ ತುಮಕೂರು ಜಿಲ್ಲೆಯ ಕ್ಯಾತಸಂದ್ರದ ನಿವಾಸಿ ಶಂಕರ್ (25) ಬಂಧಿತರು. ಆರೋಪಿಗಳಿಂದ 69 ಗ್ರಾಂ ಚಿನ್ನಾಭರಣ ಹಾಗೂ 5 ಕೆ.ಜಿ 150 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ದುಷ್ಕರ್ಮಿಗಳು ಗಿರಿನಗರ, ಬ್ಯಾಟರಾಯನಪುರ ಹಾಗೂ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು ನಾಲ್ಕು ದೇವಸ್ಥಾನಗಳಲ್ಲಿ ಕಳವು ಮಾಡಿದ್ದರು. ಹಾಗೆಯೇ ತುಮಕೂರು ಜಿಲ್ಲೆಯ ಗುಬ್ಬಿ, ಚಂದ್ರಶೇಖರಪುರ, ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದರು.

ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು, ಹಾಸನ ಜಿಲ್ಲೆಯ ನುಗ್ಗೆಹಳ್ಳಿ, ಬಾಣಾವರ ಮತ್ತು ಅರಸಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ದೇವಸ್ಥಾನಗಳಲ್ಲಿ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅಪರಾಧ ವಿಭಾಗದ(ಪೂರ್ವ) ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಮತ್ತು ಡಿಸಿಪಿ ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ, ಎಸಿಪಿ ಆರ್.ನಾಗರಾಜು ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಎನ್. ಶ್ರಿನಿಧಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.