ಸ್ವರ್ಣಾಂಬ, ವೆಂಕಟೇಶಯ್ಯ ದಂಪತಿ ಕೊಲೆ ಪ್ರಕರಣ
ಬೆಂಗಳೂರು: `ವೆಂಕಟೇಶಯ್ಯ ದಂಪತಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ್ ಮೃತರ ಮನೆಯಿಂದ ದೋಚಿಕೊಂಡು ಹೋಗಿದ್ದ ಆಭರಣಗಳನ್ನು ಅಡವಿಟ್ಟು, ಅದರಿಂದ ಬಂದ ಹಣದಲ್ಲಿ ಹಳೆಯ ಕಾರು ಖರೀದಿಸಿದ್ದ~ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ದಂಪತಿ ಮನೆಯಿಂದ ಸುಮಾರು 240 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು. ಗುರುಪ್ರಸಾದ್ ಆ ಆಭರಣಗಳನ್ನು ಕದಿರೇನಹಳ್ಳಿಯ ಗಿರವಿ ಅಂಗಡಿಯೊಂದರಲ್ಲಿ ಅಡವಿಟ್ಟು ರೂ 1.30 ಲಕ್ಷ ಹಣ ಪಡೆದುಕೊಂಡಿದ್ದ. ಆ ಹಣದಲ್ಲಿ ಹತ್ತು ಸಾವಿರ ರೂಪಾಯಿಯನ್ನು ಇತರೆ ಆರೋಪಿಗಳಾದ ಸೈಯದ್ ಸಲ್ಮಾನ್ ಮತ್ತು ನಿತೇಶ್‌ಕುಮಾರ್‌ನಿಗೆ ಕೊಟ್ಟಿದ್ದ. ಉಳಿದ ಹಣದಲ್ಲಿ ಹಳೆಯ ಕಾರು ಖರೀದಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ (ಆ.6) ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದಂಪತಿ ಮನೆ ಸಂಪ್‌ಗೆ ಕಬ್ಬಿಣದ ಮುಚ್ಚಳ ಅಳವಡಿಸುವ ಕೆಲಸ ಮಾಡುತ್ತಿದ್ದ ಆರೋಪಿಗಳು ಏಕಾಏಕಿ ಒಳ ನುಗ್ಗಿ, ಕೊಠಡಿಯೊಂದರಲ್ಲಿ ನಿದ್ರಿಸುತ್ತಿದ್ದ ಸ್ವರ್ಣಾಂಬ ಅವರ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿದ್ದರು.
ಬಳಿಕ ನಡುಮನೆಗೆ ಬಂದ ಆರೋಪಿಗಳು, ಕುರ್ಚಿ ಮೇಲೆ ಕುಳಿತಿದ್ದ ವೆಂಕಟೇಶಯ್ಯ ಅವರ ಮುಖವನ್ನು ಸಿಮೆಂಟ್ ಚೀಲದಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದರು. ದಂಪತಿ ಚೀರಾಟ ಅಕ್ಕಪಕ್ಕದ ಮನೆಯವರಿಗೆ ಕೇಳಿಸಬಾರದೆಂಬ ಕಾರಣಕ್ಕೆ ಆರೋಪಿಗಳು, ಡ್ರಿಲ್ಲಿಂಗ್ ಯಂತ್ರ ಚಾಲನೆಯಲ್ಲಿಟ್ಟುಕೊಂಡು ಕೃತ್ಯ ಎಸಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
`ಮನೆಯೊಳಗೆ ತಪಾಸಣೆ ನಡೆಸುತ್ತಿದ್ದಾಗ, ನಡುಮನೆಯಲ್ಲಿ ಮತ್ತು ದಂಪತಿ ಶವ ಪತ್ತೆಯಾಗಿದ್ದ ಕೊಠಡಿ ಹಲವೆಡೆ ಸಿಮೆಂಟ್ ಚೆಲ್ಲಾಡಿರುವ ಅಂಶ ಗಮನಕ್ಕೆ ಬಂದಿತ್ತು. ಇದರಿಂದ ಗಾರೆ ಕೆಲಸಗಾರರೆ ದಂಪತಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ಮೂಡಿತು.
ಮನೆಕೆಲಸದಾಕೆ ಮತ್ತು ನೆರೆಹೊರೆಯವರ ವಿಚಾರಣೆ ನಡೆಸಿದಾಗ, ಸಂಪ್‌ನ ದುರಸ್ತಿ ಕೆಲಸಕ್ಕೆ ಬಂದಿದ್ದ ಗುರುಪ್ರಸಾದ್ ಹಾಗೂ ಆತನ ಸಹಚರರ ಬಗ್ಗೆ ಮಾಹಿತಿ ನೀಡಿದರು. ನಂತರ ಗುರುಪ್ರಸಾದ್‌ನ ಮೊಬೈಲ್ ಸಂಖ್ಯೆ ಮತ್ತು ಕರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ಪ್ರಕರಣ ಭೇದಿಸಲಾಯಿತು~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.