ADVERTISEMENT

ನಂದಿ ಬೆಟ್ಟ ಇನ್ನು ‘ಸೈಕಲ್‌ ಸ್ನೇಹಿ ವಲಯ’

ವಾರದಲ್ಲಿ 2 ದಿನ 4 ತಾಸು, ಸೈಕಲ್‌ ಸವಾರರು, ಚಾರಣಿಗರಿಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ನಂದಿ ಬೆಟ್ಟ ಇನ್ನು ‘ಸೈಕಲ್‌ ಸ್ನೇಹಿ ವಲಯ’
ನಂದಿ ಬೆಟ್ಟ ಇನ್ನು ‘ಸೈಕಲ್‌ ಸ್ನೇಹಿ ವಲಯ’   

ಬೆಂಗಳೂರು: ಮುಂಜಾನೆ ಸೂರ್ಯ ಉದಯಿಸುವ ವೇಳೆ ನಂದಿ ಬೆಟ್ಟಕ್ಕೆ ಏಕಾಂಗಿಯಾಗಿ ಸೈಕಲ್‌ ಸವಾರಿ ಮಾಡಬೇಕು ಅಥವಾ ಚಾರಣ ಮಾಡಬೇಕೆಂದು ಹಂಬಲಿಸುವವರಿಗೊಂದು ಸುವರ್ಣ ಅವಕಾಶ.

ಜುಲೈನಿಂದ ಶನಿವಾರ ಮತ್ತು ಭಾನುವಾರದಂದು ಬೆಳಿಗ್ಗೆ 6 ರಿಂದ 10 ರವರೆಗೆ  ನಂದಿ ಬೆಟ್ಟ ಪ್ರದೇಶ ಸೈಕಲ್‌ ಸವಾರರು ಮತ್ತು ಚಾರಣಿಗರಿಗೆ ಮಾತ್ರ ಮೀಸಲು. ಮೋಟಾರು ವಾಹನಗಳಿಗೆ ಈ ಸಮಯದಲ್ಲಿ ಪ್ರವೇಶ ನಿಷೇಧ.

ನಂದಿ ಬೆಟ್ಟದ ಪ್ರದೇಶವನ್ನು ‘ಸೈಕಲ್‌ ಸ್ನೇಹಿ ವಲಯ’ ಎಂದು ಘೋಷಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ನಗರದ ಸೈಕ್ಲಿಸ್ಟ್‌ಗಳು ಮತ್ತು ಚಾರಣಿಗರ ಬೇಡಿಕೆಯ ಮೇರೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ. ಸುಧಾಕರ್‌ ‘ಸ್ಪೆಕ್ಟ್ರಮ್‌ ರೇಸಿಂಗ್‌’ ಜೊತೆ ಸೇರಿ ಈ ವಿಶೇಷ ವ್ಯವಸ್ಥೆ  ಮಾಡಿದ್ದಾರೆ.

‘ಸೈಕ್ಲಿಂಗ್‌ ಸ್ನೇಹಿ ವಲಯದ ಚಾಲನೆ ನೀಡುವುದಕ್ಕೆ ಪೂರಕವಾಗಿ ಜುಲೈ 1 ಮತ್ತು 2 ರಂದು ಸೈಕ್ಲಿಂಗ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಂದು ಸುಮಾರು 300ಕ್ಕೂ ಸೈಕಲ್‌ ಸವಾರರು ನಂದಿ ಬೆಟ್ಟದ ತಪ್ಪಲಿನಿಂದ ನೆತ್ತಿಯವರೆಗೆ ಸೈಕಲ್‌ ಸವಾರಿ ಮಾಡಲಿದ್ದಾರೆ’ ಎಂದು ಸ್ಪೆಕ್ಟ್ರಮ್‌ ರೇಸಿಂಗ್‌ನ ಡಾ. ಅರವಿಂದ್‌ ಭತೇಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಂದಿಬೆಟ್ಟ ಬೆಂಗಳೂರಿನ ಪ್ರಖ್ಯಾತ ಜೀವ ವೈವಿಧ್ಯಗಳ ತಾಣ. ಒಂಟಿಯಾಗಿ ಸೈಕಲ್‌ ಸವಾರಿ ಮಾಡುವವರು, ರನ್ನರ್‌ಗಳು ಮತ್ತು ಚಾರಣ ಮಾಡುವವರಿಗೆ ನೆಚ್ಚಿನ ಪ್ರದೇಶ. ಇಲ್ಲಿ ಅವರು ನೆಮ್ಮದಿಯಿಂದ ತಮ್ಮ ನೆಚ್ಚಿನ ಹವ್ಯಾಸವನ್ನು ಮುಂದುವರಿಸಲು ಸಹಾಯಕವಾಗಬೇಕು ಎಂಬುದೇ ನಮ್ಮ ಉದ್ದೇಶ’ ಎಂದು ತಿಳಿಸಿದರು.

‘ನಂದಿಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೆಚ್ಚಿನವರು ಮೋಟಾರು ವಾಹನಗಳಲ್ಲಿಯೇ ಬರುವುದರಿಂದ ಸೈಕಲ್‌ ಸವಾರರು ಮತ್ತು ಚಾರಣಿಗರು ತೊಂದರೆ ಅನುಭವಿಸುತ್ತಿದ್ದಾರೆ.

ಅತ್ಯಂತ ವೇಗದಲ್ಲಿ ವಾಹನಗಳನ್ನು ಓಡಿಸುವುದರಿಂದ  ಅಪಘಾತಗಳು ಸಂಭವಿಸಿ ಸೈಕಲ್‌ ಸವಾರರು ಮತ್ತು ಚಾರಣಿಗರು ಗಾಯಗೊಂಡಿದ್ದಾರೆ. ಇದನ್ನು ತಪ್ಪಿಸಲು ಶನಿವಾರ ಮತ್ತು ಭಾನುವಾರಗಳಂದು ನಿಗದಿತ ಅವಧಿಯನ್ನು ಸೈಕ್ಲಿಂಗ್‌ ಮತ್ತು ಟ್ರಕ್ಕಿಂಗ್‌ಗೆಂದು ಮೀಸಲಿಡಲಾಗಿದೆ’ ಎಂದು ಡಾ. ಸುಧಾಕರ್‌ ವಿವರಿಸಿದರು.

‘ಹೆಚ್ಚು ಜನ ಈ ಪ್ರವಾಸಿ ತಾಣಕ್ಕೆ ಬರಬೇಕು. ವಾಹನಗಳ ಭಯವಿಲ್ಲದೆ ಇಲ್ಲಿ ವಿಹರಿಸಿಕೊಂಡು ಹೋಗಲಿ ಎಂಬುದು ನಮ್ಮ ಉದ್ದೇಶ’ ಎಂದರು.

***

ಮುಂಜಾನೆಯ ನಯನ ಮನೋಹರ ನಿಸರ್ಗ ಸೌಂದರ್ಯ ಆಸ್ವಾದಿಸಲು  ಅನುಕೂಲ
ಡಾ. ಅರವಿಂದ್‌ ಭತೇಜ, ಸ್ಪೆಕ್ಟ್ರಮ್‌ ರೇಸಿಂಗ್‌ ಗ್ರೂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.