ADVERTISEMENT

ನಕಲಿ ದಾಖಲೆಯಿಂದ ಕ್ರೆಡಿಟ್‌ ಕಾರ್ಡ್‌ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 20:21 IST
Last Updated 7 ಜುಲೈ 2017, 20:21 IST
ನಕಲಿ ದಾಖಲೆಯಿಂದ ಕ್ರೆಡಿಟ್‌ ಕಾರ್ಡ್‌ ಪಡೆದು ವಂಚನೆ
ನಕಲಿ ದಾಖಲೆಯಿಂದ ಕ್ರೆಡಿಟ್‌ ಕಾರ್ಡ್‌ ಪಡೆದು ವಂಚನೆ   

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಗೆ ನಕಲಿ ದಾಖಲೆಗಳನ್ನು ನೀಡಿ, ಕ್ರೆಡಿಟ್‌ ಕಾರ್ಡ್‌ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್‌ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೇರಳದ ನಿರನ್‌ ಜಯಪಾಲ್‌ ಅಲಿಯಾಸ್‌ ನಿರಂಜ್‌ ಜೈಪಾಲ್‌ (37) ಹಾಗೂ ಮಂಗಳೂರಿನ ಕೆ.ಅಬೂಬಕರ್‌ ಅಲಿಯಾಸ್‌ ಸಾದಿಕ್‌ (39) ಬಂಧಿತರು. ಹಲವು ವರ್ಷಗಳಿಂದ ನಗರದಲ್ಲಿ ವಾಸವಿದ್ದ ಅವರಿಂದ ₹25 ಲಕ್ಷ ಮೌಲ್ಯದ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು, ಲ್ಯಾಪ್‌ಟಾಪ್‌, ಕಾರು, ಬೈಕ್‌ ಜಪ್ತಿ ಮಾಡಲಾಗಿದೆ.

‘ಆರೋಪಿಗಳು ಕಂಪ್ಯೂಟರ್‌ ಸಾಫ್ಟ್‌ವೇರ್‌ ಬಳಸಿ ನಕಲಿ ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ರತಿಷ್ಠಿತ ಕಂಪೆನಿಗಳ ಗುರುತಿನ ಚೀಟಿ, ಪಾನ್‌ಕಾರ್ಡ್‌ಗಳನ್ನು ಸೃಷ್ಟಿಸಿದ್ದರು. ಅವುಗಳನ್ನು ಬ್ಯಾಂಕ್‌ಗೆ ಕೊಟ್ಟು, ಕ್ರೆಡಿಟ್‌ ಕಾರ್ಡ್‌ ಪಡೆದಿದ್ದರು’ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದರು.

‘ಆ ಕ್ರೆಡಿಟ್‌ ಕಾರ್ಡ್‌ ಮೂಲಕ ಚಿನ್ನಾಭರಣ, ಮೊಬೈಲ್‌, ಕ್ಯಾಮೆರಾ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದರು. ಬಳಿಕ ಅವುಗಳ ಚಿತ್ರಗಳನ್ನು ಓಎಲ್‌ಎಕ್ಸ್‌ ಜಾಲತಾಣದಲ್ಲಿ ಪ್ರಕಟಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಬ್ಯಾಂಕಿಗೆ ವಾಪಸ್‌ ಹಣ ಕಟ್ಟದೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದರು’ ಎಂದು ಹೇಳಿದರು.

ಅಪರಿಚಿತರ ಮನೆ ತೋರಿಸಿ ಕಾರ್ಡ್‌ ಪಡೆದರು: ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ವಿತರಣಾ ವಿಭಾಗವಿದ್ದು, ಅಲ್ಲಿಯ ಅಧಿಕಾರಿಗಳು ಆರೋಪಿಗಳ ದಾಖಲೆಗಳ ಪರಿಶೀಲನೆಗಾಗಿ ಅವರ ವಿಳಾಸಕ್ಕೆ ಹೋಗಿದ್ದರು.

ಆಗ ಯಾರದ್ದೂ ಮನೆ ತೋರಿಸಿದ್ದ ಆರೋಪಿಗಳು, ಅದರ ಮುಂದೆ ನಿಂತು ಫೋಟೊ ತೆಗೆಸಿಕೊಂಡಿದ್ದರು. ಅದನ್ನು ನಂಬಿ ಅಧಿಕಾರಿಗಳು, ಕ್ರೆಡಿಟ್‌ ಕಾರ್ಡ್‌ ನೀಡಿದ್ದರು ಎಂದು ಪೊಲೀಸರು ಹೇಳಿದರು.

ಹಣ ಪಾವತಿಸಿ ನಂಬಿಕೆ ಗಳಿಸುತ್ತಿದ್ದರು: ‘ಕ್ರೆಡಿಟ್‌ ಕಾರ್ಡ್‌ ಸಿಕ್ಕ ಬಳಿಕ ಆರೋಪಿಗಳು ವಾರದೊಳಗೆ ಕೆಲ ವಸ್ತುಗಳನ್ನು ಖರೀದಿ ಮಾಡಿದ್ದರು. ಬಳಿಕ ಅದರ ಹಣವನ್ನು ಬ್ಯಾಂಕ್‌ಗೆ ಪಾವತಿ ಮಾಡಿ ನಂಬಿಕೆ ಗಳಿಸಿದ್ದರು. ಈ ಮೂಲಕ ಕ್ರೆಡಿಟ್‌ ಕಾರ್ಡ್‌ ಹಣದ ಮಿತಿ ಹೆಚ್ಚಿಸಿಕೊಂಡು ವಂಚಿಸುತ್ತಿದ್ದರು’ ಎಂದು ತಿಳಿಸಿದರು.

ಕಾರು ಮಾರಾಟ: ಹಣ ಪಡೆದು ವಂಚನೆ
ಕಾರು ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಆರೋಪಿಗಳಾದ ಸುಬ್ರಹ್ಮಣ್ಯಪುರದ ಮನು (38)  ಹಾಗೂ ಉಡುಪಿಯ ನವೀನ್‌ಕುಮಾರ್‌ (30) ಎಂಬುವರು ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಗರದ ಖಾಸಗಿ ಕಂಪೆನಿಯ ಉದ್ಯೋಗಿಗಳಾದ ಅವರು ಓಎಲ್‌ಎಕ್ಸ್‌ ಜಾಲತಾಣದಲ್ಲಿ  ಜಾಹೀರಾತು ನೀಡಿ ಈ ಕೃತ್ಯ ಎಸಗಿದ್ದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರುತಿ ಎರ್ಟಿಗಾ ಕಾರು ನಿಲ್ಲಿಸಿ, ವಿದೇಶಕ್ಕೆ ಬಂದಿದ್ದೇವೆ. ಪಾರ್ಕಿಂಗ್‌ ಶುಲ್ಕ ಹೆಚ್ಚಾಗಿದ್ದು, ಅದನ್ನು ಪಾವತಿಸಿದರೆ ಕಾರು ಮಾರಾಟ ಮಾಡುತ್ತೇವೆ ಎಂದು ಜಾಹೀರಾತಿನಲ್ಲಿ ಆರೋಪಿಗಳು ನಮೂದಿಸಿದ್ದರು. ಅದನ್ನು ನೋಡಿದ್ದ ಖಾಸಗಿ ಕಂಪೆನಿಯ ಉದ್ಯೋಗಿ ಸಂತೋಷ್‌, ಆರೋಪಿಗಳನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾತುಕತೆ ನಡೆಸಿದ್ದರು’.

‘ಐಸಿಐಸಿಐ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿ ವಿಮಾನ ನಿಲ್ದಾಣಕ್ಕೆ ಬಂದು ಕಾರು ತೆಗೆದುಕೊಂಡು ಹೋಗುವಂತೆ ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ಸಂತೋಷ್‌, ಮುಂಗಡವಾಗಿ ₹92,900 ಹಣವನ್ನು ಖಾತೆಗೆ ಜಮೆ ಮಾಡಿ ನಿಲ್ದಾಣಕ್ಕೆ ಹೋಗಿದ್ದರು. ಆದರೆ, ಅಲ್ಲಿ ಯಾವುದೇ ಕಾರು ಇರಲಿಲ್ಲ. ಆರೋಪಿಗಳಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಬಳಿಕವೇ ದೂರು ಕೊಟ್ಟಿದ್ದರು’ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT