ಬೆಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ದೇಶದಿಂದ ದುಬೈಗೆ ಹೊರಟಿದ್ದ ಐವರು ಮಹಿಳೆಯರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
`ಬಂಧಿತ ಮಹಿಳೆಯರೆಲ್ಲಾ 26 ರಿಂದ 30 ವರ್ಷ ವಯಸ್ಸಿನವರಾಗಿದ್ದು, ಕೆಲಸ ಹುಡುಕಿಕೊಂಡು ಸೋಮವಾರ ರಾತ್ರಿ ದುಬೈಗೆ ಹೊರಟಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ಆರೋಪಿಗಳ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಅವರ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ~ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ತಿಳಿಸಿದರು.
`ನೇಪಾಳ ಮೂಲದವರಾದ ಆರೋಪಿಗಳು ಖಾಸಗಿ ಕಂಪೆನಿಯ ದಲ್ಲಾಳಿಯೊಬ್ಬನ ಸಹಾಯದಿಂದ ನಗರಕ್ಕೆ ಬಂದಿದ್ದರು. ಆತನೇ ಅವರಿಗೆ ನಕಲಿ ಪಾಸ್‌ಪೋರ್ಟ್ ಮತ್ತು ಕೆಲಸಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿದ್ದ~ ಎಂದು ಅವರು ಮಾಹಿತಿ ನೀಡಿದರು.
ಮತ್ತೊಂದು ಪ್ರಕರಣ: ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದ ಆರೋಪದ ಮೇಲೆ ಅಫ್ಘಾನಿಸ್ತಾನ ಮೂಲದ ರಜಿಯಾ ಸುಲ್ತಾನ್ ಎಂಬ ಮಹಿಳೆಯನ್ನು ಉತ್ತರ ವಲಯದ ಪೊಲೀಸರು ಬಂಧಿಸಿದ್ದಾರೆ.
ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಮಹಿಳೆ, ಮತ್ತೆ ದೇಶಕ್ಕೆ ಹೋಗಿರಲಿಲ್ಲ. ಕೆಲ ವಾರಗಳ ಹಿಂದೆಯೇ ಆಕೆಯ ವೀಸಾ ಮಾನ್ಯತೆ ಕಳೆದುಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.