ADVERTISEMENT

ನಗರಕ್ಕೆ ಬಂದಿಳಿದ ಪಾಕ್ ಆಟಗಾರರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 20:01 IST
Last Updated 22 ಡಿಸೆಂಬರ್ 2012, 20:01 IST
ಪಾಕಿಸ್ತಾನ ತಂಡದ ಆಟಗಾರ ಶಾಹಿದ್ ಅಫ್ರಿದಿ ವಿಮಾನ ನಿಲ್ದಾಣದಿಂದ ಹೊರಬಂದ ಕ್ಷಣ 	-ಪ್ರಜಾವಾಣಿ ಚಿತ್ರ
ಪಾಕಿಸ್ತಾನ ತಂಡದ ಆಟಗಾರ ಶಾಹಿದ್ ಅಫ್ರಿದಿ ವಿಮಾನ ನಿಲ್ದಾಣದಿಂದ ಹೊರಬಂದ ಕ್ಷಣ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಐದು ವರ್ಷಗಳ ಬಿಡುವಿನ ಬಳಿಕ ಭಾರತದಲ್ಲಿ ಕ್ರಿಕೆಟ್ ಸರಣಿಯನ್ನಾಡಲಿರುವ ಪಾಕಿಸ್ತಾನ ತಂಡದ ಆಟಗಾರರು ಶನಿವಾರ ರಾತ್ರಿ ಉದ್ಯಾನನಗರಿಗೆ ಬಂದಿಳಿದರು. ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಹಣಾಹಣಿ ಡಿ. 25 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಾಕ್ ತಂಡ ಲಾಹೋರ್‌ನಿಂದ ನವದೆಹಲಿ ಮಾರ್ಗವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಆ ಬಳಿಕ ತಂಡ ಬಸ್‌ನಲ್ಲಿ ನೇರವಾಗಿ ಹೋಟೆಲ್‌ಗೆ ತೆರಳಿತು. ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗಿನ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೆಲ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಪಾಕಿಸ್ತಾನ ತಂಡ ಭಾರತದಲ್ಲಿ 2007 ರಲ್ಲಿ ಕೊನೆಯದಾಗಿ ಪೂರ್ಣ ಪ್ರಮಾಣದ ಸರಣಿಯನ್ನು ಆಡಿತ್ತು. 2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಎರಡು ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ನಡೆದಿರಲಿಲ್ಲ.

ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತಕ್ಕೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಲೇ ಬಂದಿತ್ತು. ಕೊನೆಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು.

ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಕೆಲ ಸಂಘಟನೆಗಳು ಬೆದರಿಕೆ ಒಡ್ಡಿರುವ ಕಾರಣ, ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿದೆ.

ನವದೆಹಲಿ ವರದಿ: ಶನಿವಾರ ಮಧ್ಯಾಹ್ನ ಲಾಹೋರ್‌ನಿಂದ ಪಯಣ ಬೆಳೆಸಿದ ಮಹಮ್ಮದ್ ಹಫೀಜ್ ನೇತೃತ್ವದ ಪಾಕ್ ತಂಡ ಸಂಜೆಯ ವೇಳೆಗೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಈ ವೇಳೆ ಬಿಸಿಸಿಐ ಮತ್ತು ಪಾಕ್ ಹೈಕಮೀಷನ್‌ನ ಅಧಿಕಾರಿಗಳು ಹಾಜರಿದ್ದರು.

`ಭಾರತದ ನೆಲಕ್ಕೆ ಕಾಲಿಟ್ಟಾಗ ಪಾಕ್ ಆಟಗಾರರು ಬಹಳ ಖುಷಿ ಪಟ್ಟರು. ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು' ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ತಿಳಿಸಿದರು.

ಕರಾಚಿ ವರದಿ: ಭಾರತಕ್ಕೆ ತೆರಳುವುದಕ್ಕೆ ಮುನ್ನ ಪಾಕ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹಾಗೂ ಜಾವೇದ್ ಮಿಯಾಂದಾದ್ ಅವರು ತಮ್ಮ ದೇಶದ ಆಟಗಾರರಿಗೆ ತಾಂತ್ರಿಕ ವಿಷಯಗಳ ಬಗ್ಗೆ  ಕಿವಿಮಾತು ಹೇಳಿದರು.
ಪಾಕ್ ತಂಡ ಈ ಪ್ರವಾಸದಲ್ಲಿ ಎರಡು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಎರಡನೇ ಟಿ-20 ಪಂದ್ಯ ಅಹಮದಾಬಾದ್‌ನಲ್ಲಿ ಡಿ.28 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.