ADVERTISEMENT

ನಗರದಲ್ಲಿ ಕಾವೇರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:05 IST
Last Updated 3 ಅಕ್ಟೋಬರ್ 2012, 19:05 IST

ಬೆಂಗಳೂರು: `ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ~ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ನಗರ ತಮಿಳು ಸಂಘದ ಸದಸ್ಯರು, `ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಸರ್ಕಾರ, ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿರುವ ಕ್ರಮ ಸರಿಯಲ್ಲ. ರಾಜ್ಯದ ಜಲಾಶಯಗಳು ಬರಿದಾಗಿದ್ದು, ರೈತರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರು ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಬೇಕೆಂದು ತೆಗೆದುಕೊಂಡಿರುವ ನಿರ್ಧಾರ ಏಕಪಕ್ಷೀಯವಾದದ್ದು~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ (ಸಮತಾವಾದ) ಸದಸ್ಯರು ಪುರಭವನದ ಮುಂದೆ ಪ್ರತಿಭಟನೆ ನಡೆಸಿ, ಕಾವೇರಿ ನದಿ ಪ್ರಾಧಿಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದರು. `ರಾಜ್ಯದಲ್ಲಿನ ವಾಸ್ತವ ಸ್ಥಿತಿಯನ್ನು ಪ್ರಧಾನಮಂತ್ರಿ ಅವರಿಗೆ ತಿಳಿಸುವಲ್ಲಿ ರಾಜ್ಯದಿಂದ ಚುನಾಯಿತರಾಗಿರುವ ಸಚಿವರು ಸೋತಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಮಂತ್ರಿ ಅವರು ಮುಂದಾಲೋಚನೆ ಇಲ್ಲದೇ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು~ ಎಂದು ಸಮಿತಿಯ ರಾಜ್ಯ ಘಟಕದ ಉಪ ಸಂಚಾಲಕ ಎಚ್.ಮಾರಪ್ಪ ಒತ್ತಾಯಿಸಿದರು.

`ನಗರ ಬೆಳೆಯುತ್ತಿರುವಷ್ಟೇ ವೇಗದಲ್ಲಿ ಸಮಸ್ಯೆಗಳೂ ಹೆಚ್ಚುತ್ತಿವೆ. ಸದ್ಯದ ಕುಡಿಯುವ ನೀರಿನ ಸಮಸ್ಯೆಯಂತೂ ಸಾರ್ವಜನಿಕರಿಗೆ ಜಟಿಲ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಯಾವ ನ್ಯಾಯ. ಈ ಬಗ್ಗೆ ನಗರದ ನಿವಾಸಿಗಳು, ಸಂಘ ಸಂಸ್ಥೆಗಳು ಕಣ್ಮುಚ್ಚಿ ಕುಳಿತಿವೆ. ಮಂಡ್ಯ, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲಿ ರೈತಾಪಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಬೆಂಗಳೂರಿನ ನಾಗರಿಕರೂ ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ~ ಎಂದು ನಗರ ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಎಲ್.ಲಕ್ಕೇಗೌಡ ಹೋರಾಟಕ್ಕೆ ಕರೆ ನೀಡಿದರು.

ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿರಂತರವಾಗಿ ತಗಾದೆ ತೆಗೆಯುತ್ತಲೇ ಇದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ತಮಿಳುನಾಡು ಪರವಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಗಾಯಿತ್ರಿನಗರದಿಂದ ಮಲ್ಲೇಶ್ವರ ಮೇಲ್ಸೇತುವೆವರೆಗೆ ಕತ್ತೆ ಮೆರವಣಿಗೆ ನಡೆಸಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ಮಲ್ಲೇಶ್ವರ ವೃತ್ತದಲ್ಲಿ ಜಯಲಲಿತಾ ಮತ್ತು ಮನಮೋಹನ್‌ಸಿಂಗ್ ಅವರ ಪ್ರತಿಕೃತಿ ದಹನ ಮಾಡಿದರು.

`ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೇಂದ್ರ ಸರ್ಕಾರ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಹರಿಸುವಂತೆ ರಾಜ್ಯಕ್ಕೆ ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು~ ಎಂದು ರಾಜ್ಯ ಪ್ರಜಾ ವೇದಿಕೆ ಅಧ್ಯಕ್ಷ ಆಲೂರು ನಾಗಪ್ಪ ಆಗ್ರಹಿಸಿದ್ದಾರೆ.

ಕರ್ನಾಟಕ ಬಂದ್‌ಗೆ ಬೆಂಬಲ
`ಕಾವೇರಿ ನೀರಿನ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಗೌರವಿಸಬೇಕಾಗುತ್ತದೆ. ಆದರೆ, ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಚಿಂತಿಸುತ್ತಿಲ್ಲ. ಈ ನಿಟ್ಟಿನಲ್ಲಿ ಅ. 6 ರಂದು ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ರಕ್ಷಣಾ ವೇದಿಕೆ, ವಾಟಾಳ್ ಪಕ್ಷ ಮತ್ತು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದನ್ನು ಸ್ವಾಗತಿಸಿ, ಆ ಬಂದ್‌ನಲ್ಲಿ ನಾವೂ ಕೂಡ ಕೈ ಜೋಡಿಸುತ್ತೇವೆ~ಎಂದು ರಾಜ್ಯ ಪ್ರದೇಶ ಯುವಕ ರೈತ ಸಮಾಜದ ಬಿ.ವಿ. ಮಂಜುನಾಥಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.