ADVERTISEMENT

ನಗರದಲ್ಲಿ ಮಳೆ; ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 19:45 IST
Last Updated 25 ಫೆಬ್ರುವರಿ 2011, 19:45 IST
ನಗರದಲ್ಲಿ ಮಳೆ; ಜನರ ಪರದಾಟ
ನಗರದಲ್ಲಿ ಮಳೆ; ಜನರ ಪರದಾಟ   

ಬೆಂಗಳೂರು: ಶುಕ್ರವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಅಕಾಲಿಕ ಜಡಿ ಮಳೆಯಿಂದ ನಗರದ ನಾಗರಿಕರು, ಅದರಲ್ಲೂ ಪ್ರಯಾಣಿಕರು ಪರದಾಡುವಂತಾಯಿತು. ಮಳೆಗೆ ಚೆಲ್ಲಾಟವಾದರೆ ದಾರಿಹೋಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಪ್ರಾಣಸಂಕಟವಾಯಿತು.

ಸಂಜೆ 5.20ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. 2 ಸೆ.ಮೀ. ಮಳೆ ಪ್ರಮಾಣ ದಾಖಲಾಯಿತು.

ವಿಶ್ವಕಪ್ ಕ್ರಿಕೆಟ್‌ನ ಮಹತ್ವದ ಪಂದ್ಯವೊಂದು ನಗರದಲ್ಲಿ ನಡೆಯುವ ಎರಡು ದಿನ ಮೊದಲೇ ಅಬ್ಬರದಿಂದ ಇನಿಂಗ್ಸ್ ಆರಂಭಿಸಿದ ವರುಣ ಯಾವ ಕ್ರಿಕೆಟರ್‌ಗೂ ಕಡಿಮೆ ಇಲ್ಲದಂತೆ ಆಟ ಆಡಿ ಭೂದೇವಿಯ ತಾಪವನ್ನು ತಣಿಸಿದ. ಬೀದಿ ಬದಿ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಮಳೆಯಿಂದ ಆಶ್ರಯ ಪಡೆದರು. ಕಚೇರಿ ಸಮಯ ಮುಗಿದದ್ದರಿಂದ ತಮ್ಮ ಮನೆಗಳಿಗೆ ತಲುಪಲು ದಾರಿಯಲ್ಲಿದ್ದವರು ಮಳೆ ನೀರಿನಲ್ಲಿ ನೆನೆದರು. ಮಳೆಯ ಮುನ್ಸೂಚನೆ ಅರಿಯದ ಸಾರ್ವಜನಿಕರು ಕೊಡೆ, ಜರ್ಕಿನ್‌ಗಳನ್ನು ಕೊಂಡೊಯ್ಯದೇ ಇದ್ದುದರಿಂದ ನೀರಲ್ಲಿ ನೆನೆಯುವಂತಾಯಿತು.

ತುಂಬಿದ ಮೋರಿಗಳು, ರಸ್ತೆಗೆ ನೀರು: ಎಸ್.ಕೆ.ಗಾರ್ಡನ್‌ನ ಹಲವು ಮನೆಗಳಿಗೆ ನೀರು ತುಂಬಿಕೊಂಡು ನಿವಾಸಿಗಳು ಪರದಾಡುವಂತಾಯಿತು. ಅಟ್ಟೂರಿನ ಕೆರೆಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲೂ ಮಳೆ ನೀರು ತುಂಬಿಕೊಂಡಿತ್ತು. ಹಲಸೂರು, ಒಳವರ್ತುಲ ರಸ್ತೆಯ ಡೆಲ್ ಕಂಪೆನಿ ಹತ್ತಿರದ ತಿರುವು, ಪುಲಿಕೇಶಿ ನಗರದ ಪಾಟರಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ 26ನೇ ಗೇಟ್, ಕೋರಮಂಗಲ ಮತ್ತು ಯಮಲೂರಿನಲ್ಲಿ ಮೋರಿಗಳು ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿದ ಬಗ್ಗೆ ವರದಿಯಾಗಿದೆ.  ಬಾಣಸವಾಡಿಯ ಅಯ್ಯಪ್ಪ ದೇವಸ್ಥಾನದ ಸಮೀಪ ಮರವೊಂದು ಉರುಳಿಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.