ADVERTISEMENT

ನಗರದಲ್ಲೂ ಅತ್ಯಾಚಾರ...

ಕಾಡುಗೋಡಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 20:12 IST
Last Updated 19 ಡಿಸೆಂಬರ್ 2012, 20:12 IST
ಅಶ್ವತ್ಥ್
ಅಶ್ವತ್ಥ್   

ಬೆಂಗಳೂರು: ಚಿಪ್ಸ್ ತೆಗೆದುಕೊಳ್ಳಲು ಅಂಗಡಿಗೆ ಬಂದಿದ್ದ 15 ವರ್ಷದ ಬಾಲಕಿಯನ್ನು ಅಂಗಡಿ ಮಾಲೀಕ ಸ್ನೇಹಿತರ ನೆರವಿನಿಂದ ಒಳಗೆ ಎಳೆದೊಯ್ದು ಅತ್ಯಾಚಾರ ನಡೆಸಿರುವ ಘಟನೆ ನಗರದ ಕಾಡುಗೋಡಿ ಬಳಿಯ ಪಟಾಲಮ್ಮ ಲೇಔಟ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಾಲಕಿ ಪೋಷಕರು ದೂರು ಕೊಟ್ಟಿದ್ದು, ಕಾಡುಗೋಡಿ ಪೊಲೀಸರು ಅಂಗಡಿ ಮಾಲೀಕ ಅಶ್ವತ್ಥ್ (28) ಎಂಬಾತನನ್ನು ಬುಧವಾರ ಬಂಧಿಸಿದ್ದಾರೆ. ಗುಲ್ಬರ್ಗ ಜಿಲ್ಲೆ ಕಡಬೂರು ಗ್ರಾಮದವರಾದ ಬಾಲಕಿಯ ಪೋಷಕರು, ಗಾರೆ ಕೆಲಸ ಮಾಡಿಕೊಂಡು ಮೂರು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದಾರೆ. ಸದ್ಯ ಪಟಾಲಮ್ಮ ಲೇಔಟ್‌ನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಆ ಕಟ್ಟಡದ ಸಮೀಪವೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದಾರೆ.

ಬಾಲಕಿ, ಚಿಪ್ಸ್ ತೆಗೆದುಕೊಳ್ಳುವ ಉದ್ದೇಶದಿಂದ ಸಂಜೆ ಆರು ಗಂಟೆ ಸುಮಾರಿಗೆ ಶೆಡ್‌ನ ಸಮೀಪದಲ್ಲೇ ಇರುವ ಆರೋಪಿ ಅಶ್ವತ್ಥ್‌ನ ಅಂಗಡಿಗೆ ಬಂದಿದ್ದಳು. ಈ ವೇಳೆ ಆರೋಪಿಯು ಸ್ಥಳದಲ್ಲಿದ್ದ ಮಂಜು ಮತ್ತು ರವಿ ಎಂಬ ಸ್ನೇಹಿತರ ಜತೆ ಸೇರಿಕೊಂಡು ಬಾಲಕಿಯನ್ನು ಅಂಗಡಿಯೊಳಗೆ ಎಳೆದೊಯ್ದಿದ್ದಾನೆ. ನಂತರ ಅಂಗಡಿಯ ಶಟರ್ ಮುಚ್ಚಿ, ದುಪ್ಪಟ್ಟದಿಂದ ಬಾಲಕಿಯ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ಬಳಿಕ ಅಶ್ವತ್ಥ್ ಸ್ನೇಹಿತರ ಎದುರೇ  ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿಗೆ ಹೋಗಿದ್ದ ಮಗಳು ಮನೆಗೆ ವಾಪಸ್ ಬಾರದಿದ್ದರಿಂದ ಅನುಮಾನಗೊಂಡ ಪೋಷಕರು ಸುತ್ತಮುತ್ತಲ ಪ್ರದೇಶದಲ್ಲಿ ರಾತ್ರಿ ಒಂಬತ್ತು ಗಂಟೆವರೆಗೂ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆ ನಂತರ ಅವರು ಆರೋಪಿಯ ಅಂಗಡಿ ಬಳಿ ಹೋದಾಗ ಮಳಿಗೆಯ ಅರ್ಧ ಬಾಗಿಲು ತೆರೆದಿತ್ತು. ಪೋಷಕರು ಅನುಮಾನದಿಂದ ಅಂಗಡಿಯ ಒಳ ಹೋಗಿ ನೋಡಿದಾಗ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮಗಳನ್ನು ಕರೆದುಕೊಂಡು ಬಂದು ಉಪಚರಿಸಿದಾಗ ಎಚ್ಚರಗೊಂಡ ಆಕೆ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಅಶ್ವತ್ಥ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಇತರೆ ಆರೋಪಿಗಳಾದ ಮಂಜು ಮತ್ತು ರವಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಮಗಳು ವಿಷಯ ತಿಳಿಸುತ್ತಿದ್ದಂತೆ ದೂರು ನೀಡಲು ಠಾಣೆಗೆ ಹೋಗಿದ್ದೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರು. ಸಿಬ್ಬಂದಿ ಗಸ್ತಿಗೆ ಹೋಗಿದ್ದು, ಬೆಳಿಗ್ಗೆ ಬಂದು ದೂರು ಕೊಡಿ ಎಂದು ಹೇಳಿದರು. ಈ ಅಮಾನುಷ ಕೃತ್ಯ ಎಸಗಿದವನಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಬಾಲಕಿ ತಂದೆ ಆಕ್ರೋಶ ವ್ಯಕ್ತಪಡಿಸಿದರು.

`ಅಶ್ವತ್ಥ್ ಹಲವು ದಿನಗಳಿಂದ ಬಾಲಕಿಯನ್ನು ಚುಡಾಯಿಸುತ್ತಿದ್ದ. ಆಕೆ ಇದನ್ನು ನಮ್ಮ ಗಮನಕ್ಕೂ ತಂದಿದ್ದಳು. ಈ ಸಂಬಂಧ ಆತನೊಂದಿಗೆ ಜಗಳ ಕೂಡ ಆಗಿತ್ತು. ಆದರೆ, ರಾತ್ರಿ ಇಂತಹ ಅನಾಹುತ ನಡೆದಿದೆ' ಎಂದು ಬಾಲಕಿ ಅತ್ತಿಗೆ ರಂಜಾನಾ ಹೇಳಿದರು.
`ಘಟನೆ ಸಂಬಂಧ ಬಾಲಕಿಯ ತಂದೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಅಶ್ವತ್ಥ್‌ನನ್ನು ಬಂಧಿಸಲಾಗಿದೆ.

ಬಾಲಕಿ ಮತ್ತು ಆರೋಪಿಯನ್ನು ನಗರದ ವೈದೇಹಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯರು ವರದಿ ನೀಡಿದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

ಬಾಲಕಿ ಹೇಳಿಕೆ
`ಇಬ್ಬರು ನನ್ನನ್ನು ಅಂಗಡಿಯೊಳಗೆ ತಳ್ಳಿ ಶಟರ್ ಎಳೆದರು. ಅಶ್ವತ್ಥ್ ದುಪ್ಪಟ್ಟದಿಂದ ನನ್ನ ಕಾಲುಗಳನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ. ನಂತರ ನಾನು ಪ್ರಜ್ಞೆ ತಪ್ಪಿದೆ. ಬಳಿಕ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಪೋಷಕರು ರಾತ್ರಿ ಅಂಗಡಿಗೆ ಬಂದಾಗಲೇ ನನಗೆ ಎಚ್ಚರವಾಗಿದ್ದು' .

ಸುರಕ್ಷತಾ ಕ್ರಮಕ್ಕೆ ಆಗ್ರಹ
`ನಗರದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೃಹಮಂತ್ರಿ ಆರ್.ಅಶೋಕ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈಗ ಮತ್ತೊಂದು ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಆಯೋಗದ ಸದಸ್ಯರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಧ್ಯೆ ಪ್ರವೇಶ ಮಾಡಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು'
- ಮಂಜುಳಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ADVERTISEMENT

ಹಿಂದಿನ ಪ್ರಕರಣಗಳು
* ನಾಗರಾಜ್ ಎಂಬಾತ ಜೂ.16ರಂದು ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ನಗರದ ವೈಟ್‌ಫೀಲ್ಡ್ ಸಮೀಪದ ನೆಲ್ಲೂರಹಳ್ಳಿ ಕೆರೆಗೆ ಎಸೆದಿದ್ದ.

* ಮಂಜುನಾಥ್ ಎಂಬಾತ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಿಳೇಕಹಳ್ಳಿಯಲ್ಲಿ ಶನಿವಾರ (ಜುಲೈ, 07, 2012) ರಾತ್ರಿ ನಡೆದಿದೆ. ಆಟವಾಡುತ್ತಿದ್ದ ಬಾಲಕಿಯನ್ನು ತಿಂಡಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋದ ಆರೋಪಿ, ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದ. ಆರೋಪಿಯನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದರು.

* ನಗರದ ಜ್ಞಾನಭಾರತಿ ಆವರಣದಲ್ಲಿ ಅಕ್ಟೋಬರ್ 13ರಂದು ದುಷ್ಕರ್ಮಿಗಳ ಗುಂಪು ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತ್ತು.

* ನಾಲ್ಕು ವರ್ಷದ ಮಗುವಿಗೆ ನಾಗರಬಾವಿಯಲ್ಲಿರುವ ಸೇಂಟ್ ಸೋಫಿಯಾ ಶಾಲಾ ವಾಹನದ ಚಾಲಕ ಸಾಬಣ್ಣ ಎಂಬಾತ ಇತ್ತೀಚೆಗೆ ಲೈಂಗಿಕ ಕಿರುಕುಳ ನೀಡಿದ್ದ. ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗುವನ್ನು ಶೌಚಾಲಯಕ್ಕೆ ಕರೆದೊಯ್ದು ಒಂದು ತಿಂಗಳಿಂದ ಲೈಂಗಿಕ ಕಿರುಕುಳ ನೀಡುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

* ಐದು ವರ್ಷದ ಮಗು ತಂದೆಯ ಸ್ನೇಹಿತನಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಘಟನೆ ಡಿ.10ರಂದು ಕುಮಾರಸ್ವಾಮಿ ಬಡಾವಣೆಯಲ್ಲಿ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.