ADVERTISEMENT

ನದಿಗಳ ಉಳಿವಿಗೆ ಅರಣ್ಯ ರಕ್ಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 18:30 IST
Last Updated 10 ಜುಲೈ 2012, 18:30 IST

ಬೆಂಗಳೂರು: `ಅರಣ್ಯ ನಾಶವಾದರೆ ನದಿಗಳು ಬತ್ತಿ ಹೋಗಲಿವೆ. ನೀರಿನ ಮೂಲಗಳನ್ನು ಸಂರಕ್ಷಿಸಬೇಕೆಂದರೆ ಅರಣ್ಯ ಉಳಿಸಬೇಕು. ಕಾವೇರಿ ನದಿಯನ್ನು ರಕ್ಷಿಸಲು ಕೊಡಗು ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕರೆ ನೀಡಿದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

`ಕಾವೇರಿ ನದಿ ಸಂರಕ್ಷಿಸಲು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು. ಅರಣ್ಯ ರಕ್ಷಣೆ ಮೂಲಕ ನಾಡು ಮತ್ತು ಜನರಿಗೆ ಮಹತ್ತರ ಸೇವೆ ಸಲ್ಲಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ~ ಎಂದು ಅವರು ಭರವಸೆ ನೀಡಿದರು. `ಸ್ವಿಟ್ಜರ್‌ಲ್ಯಾಂಡ್, ಜರ್ಮನಿ ಸೇರಿದಂತೆ ಯೂರೋಪ್‌ನಲ್ಲಿ ಅನಿವಾರ್ಯವಾಗಿ ಒಂದು ಮರ ಕಡಿದರೆ ಆರು ಮರ ಬೆಳೆಸುವುದನ್ನು ವ್ರತದಂತೆ ಪಾಲಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸಾಗಬೇಕಿದೆ~ ಎಂದರು.

`ರಾಜ್ಯದ ಅರಣ್ಯಗಳು ನಕ್ಸಲರ ಅಡಗುತಾಣಗಳಾಗುವುದು ಬೇಡ. ಪ್ರವಾಸಿಗರು ಭೇಟಿ ನೀಡುವ ಪರಿಸರ ತಾಣಗಳಾಗಿ ಅಭಿವೃದ್ಧಿ ಹೊಂದಲಿ. ಅರಣ್ಯಕ್ಕೆ ಹೊಂದಿಕೊಂಡ ಹೆದ್ದಾರಿಗಳ ಬದಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು~ ಎಂದು ಅವರು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಧರನ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ವರ್ಮ, ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಜಿ.ಆರ್.ಮಾವಿನ್ ಕುರ್ವೆ, ರಾಜ್ಯ ವನ್ಯಜೀವಿ ಮಂಡಲಿ  ಉಪಾಧ್ಯಕ್ಷ ಅನಿಲ್ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.

`ಯುನೆಸ್ಕೊ ನಿರ್ಧಾರ ಒಪ್ಪಿಕೊಳ್ಳಿ~

ಬೆಂಗಳೂರು: `ಪಶ್ಚಿಮ ಘಟ್ಟಗಳನ್ನು ವಿಶ್ವ ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಗೆ ಯುನೆಸ್ಕೊ ಸೇರಿಸಿರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಯುನೆಸ್ಕೊದ ಮಾನ್ಯತೆಯು ಜಾಗತಿಕ ಗೌರವವಾಗಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.

ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ವರದಿಗಾರರೊಂದಿಗೆ ಅವರು ಮಾತನಾಡಿದರು.`ಯುನೆಸ್ಕೊ ಮಾನ್ಯತೆಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿರುವುದು ಏಕೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರಿಗೆ ಸೂಚಿಸಿದ್ದೇನೆ.

ಅವರು ನೀಡುವ ಮಾಹಿತಿ ಪರಿಶೀಲಿಸಿದ ಮೇಲೆ ಅಗತ್ಯ ಬಿದ್ದರೆ ಅರಣ್ಯ ಸಚಿವರು ಅಥವಾ ಹಿರಿಯ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತೇನೆ~ ಎಂದು ಅವರು ತಿಳಿಸಿದರು.
ಅಸ್ಥಿರತೆಗೆ ವಿಷಾದ: `ಸುಸಂಸ್ಕೃತ ಮತ್ತು ಸುಶಿಕ್ಷಿತ ಜನರು ಹೆಚ್ಚಾಗಿರುವ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದು ಅಚ್ಚರಿ ತಂದಿದೆ. ಇದೊಂದು ವಿಷಾದಕರ ಬೆಳವಣಿಗೆ~ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.