ADVERTISEMENT

ನಮ್ಮ ಮೆಟ್ರೊ ಕಾಮಗಾರಿ ಸ್ಥಗಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 19:05 IST
Last Updated 22 ಜೂನ್ 2011, 19:05 IST
ನಮ್ಮ ಮೆಟ್ರೊ ಕಾಮಗಾರಿ ಸ್ಥಗಿತಕ್ಕೆ ಸೂಚನೆ
ನಮ್ಮ ಮೆಟ್ರೊ ಕಾಮಗಾರಿ ಸ್ಥಗಿತಕ್ಕೆ ಸೂಚನೆ   

ಬೆಂಗಳೂರು:   ನಗರ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ `ನಮ್ಮ ಮೆಟ್ರೊ~ದ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ರೈಲ್ವೆ ಇಲಾಖೆಯವರು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಸೂಚಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ನಗರ ರೈಲು ನಿಲ್ದಾಣದ ಆವರಣದಲ್ಲಿ ಒಟ್ಟು ಮೂರು ಕಡೆ (ಪ್ಲಾಟ್‌ಫಾರಂ ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯ ಮತ್ತು ರೈಲ್ವೆ ಇಲಾಖೆ ನೌಕರರ ವಸತಿಗೃಹಗಳು) ಮೆಟ್ರೊ ನೆಲದಡಿಯ ನಿಲ್ದಾಣ ಮತ್ತು ಸುರಂಗ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.

ಮೆಟ್ರೊ ನಿಗಮದವರು ರೈಲ್ವೆ ವಸತಿ ಗೃಹಗಳಿಗೆ ಸೂಕ್ತ ಭದ್ರತೆ ಒದಗಿಸಿಲ್ಲ, ಕಾಮಗಾರಿ ಕೈಗೊಂಡಿರುವ ಸುತ್ತಮುತ್ತಲ ಜಾಗದಲ್ಲಿ ರಸ್ತೆ ಮತ್ತು ಚರಂಡಿಗಳ ದುರಸ್ತಿ ಕಾರ್ಯ ಕೈಗೊಂಡಿಲ್ಲ- ಇವು ರೈಲ್ವೆಯವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

`ರೈಲ್ವೆ ಜಾಗ ಬಳಸಿಕೊಳ್ಳಲು ಪರವಾನಗಿ ಶುಲ್ಕವಾಗಿ 98 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. 14 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ನೌಕರರಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ. ಆದರೂ ತಕರಾರು ಎತ್ತುತ್ತಿರುವುದು ಸರಿಯಲ್ಲ~ ಎಂದು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ಹೇಳಿದರು.

ರೀಚ್- 1ರ ಮಾರ್ಗದ ಖುದ್ದು ಪರಿಶೀಲನೆ ಕಾರ್ಯ ಪೂರ್ಣ

ಲಖನೌದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಮಾಪನ ಸಂಸ್ಥೆಯ (ಆರ್‌ಡಿಎಸ್‌ಒ) ಆರು ಮಂದಿ ತಂತ್ರಜ್ಞರ ತಂಡವು ನಗರದ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಖುದ್ದು ಪರಿಶೀಲಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ.

ಆರ್‌ಡಿಎಸ್‌ಒ ತಂಡ ನೀಡುವ ವರದಿ ಆಧಾರದ ಮೇಲೆ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಅಂತಿಮ ಹಂತದ ಪರೀಕ್ಷಾರ್ಥ ಸಂಚಾರ ಪರಿಶೀಲಿಸಿ ಸುರಕ್ಷತಾ ಪ್ರಮಾಣ ಪತ್ರ ನೀಡಲಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೊಂದು ತಿಂಗಳ ಸಮಯಾವಕಾಶ ಬೇಕಾಗಲಿದೆ ಎಂದು `ಬೆಂಗಳೂರು ಮೆಟ್ರೊ ರೈಲು ನಿಗಮ~ದ ಮೂಲಗಳು ತಿಳಿಸಿವೆ.

ಆರ್‌ಡಿಎಸ್‌ಒ ತಂಡ ರೈಲು ಗಾಡಿಯ ಬ್ರೇಕ್ ವ್ಯವಸ್ಥೆ, ಹಳಿ ಸಂರಚನೆ, ವೇಗದ ಏರಿಳಿತ ಮೊದಲಾದ ಹಲವು ತಾಂತ್ರಿಕ ಅಂಶಗಳನ್ನು ಪರೀಕ್ಷಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷಿಸುವ ಮುನ್ನ ರೈಲು ಗಾಡಿಗಳು ಕನಿಷ್ಠ 2,500 ಕಿ.ಮೀ.ಗಳಷ್ಟು  ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸುವುದು ಕಡ್ಡಾಯ. ಹೀಗಾಗಿ ನಿಗಮವು ರೈಲು ಗಾಡಿಗಳ ಪರೀಕ್ಷಾರ್ಥ ಸಂಚಾರವನ್ನು ಮುಂದುವರೆಸಲಿದೆ. ಆಯುಕ್ತರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ಲಾಟ್‌ಫಾರಂ ಸೇರಿದಂತೆ ನಿಲ್ದಾಣಗಳಲ್ಲಿನ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಪ್ರಮಾಣ ಪತ್ರ ನೀಡಲಿದೆ.

ಈ ಪ್ರಮಾಣ ಪತ್ರ ಪಡೆದ ಬಳಿಕ, ಅಂದರೆ ಆಗಸ್ಟ್ ತಿಂಗಳಲ್ಲಿ ರೀಚ್- 1ರಲ್ಲಿ ಮೆಟ್ರೊ ರೈಲು ಗಾಡಿಯ ಸಾರ್ವಜನಿಕ ಸಂಚಾರ ವಿಧ್ಯುಕ್ತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT