ADVERTISEMENT

`ನಮ್ಮ ವೆುಟ್ರೊ' ಬುಲೆವಾರ್ಡ್‌ನಲ್ಲಿ ರೆಸ್ಟೋರೆಂಟ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:41 IST
Last Updated 7 ಏಪ್ರಿಲ್ 2013, 19:41 IST

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ವತಿಯಿಂದ ಅನಿಲ್ ಕುಂಬ್ಳೆ ವೃತ್ತದ ಬಳಿಯ ಬುಲೆವಾರ್ಡ್ (ಉದ್ಯಾನಸಹಿತ ಪಾದಚಾರಿ ಮಾರ್ಗ)ನಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ.

ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಮೇ ತಿಂಗಳ ಆರಂಭದಲ್ಲಿ ರೆಸ್ಟೋರೆಂಟ್ ಆರಂಭಗೊಳ್ಳುವ ನಿರೀಕ್ಷೆ ಇದೆ. ರೆಸ್ಟೋರೆಂಟ್‌ನ ವಿಶೇಷವೆಂದರೆ ಭಾರತೀಯ ಸಾಂಪ್ರದಾಯಿಕ ತಿನಿಸುಗಳ ಸೊಬಗು ಇರಲಿದೆ. ನಗರದ ಜನತೆ ಸಾಮಾನ್ಯ ಜನರು ಬಯಸುವ ತಿಂಡಿ ತಿನಿಸುಗಳು ಇಲ್ಲಿರಲಿವೆ ಎಂಬುದು `ನಮ್ಮ ಮೆಟ್ರೊ' ಅಧಿಕಾರಿಗಳ ವಿಶ್ವಾಸದ ನುಡಿ.

ರೆಸ್ಟೋರೆಂಟ್ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ಸಾಮಗ್ರಿಯನ್ನು ಮಾರಾಟ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ರೆಸ್ಟೋರೆಂಟ್ ಆರಂಭಕ್ಕೆ ಸೂಕ್ತ ಸ್ಥಳವನ್ನು ಹುಡುಕಲಾಗಿದ್ದು, ಬಿಬಿಎಂಪಿ ಆಸಕ್ತರಿಂದ ಬಿಡ್ ಆಹ್ವಾನಿಸಿದೆ. ಉನ್ನತ ಗುಣಮಟ್ಟ, ಉತ್ತಮ ಸೇವೆ ಮತ್ತಿತರ ಅಂಶಗಳನ್ನು ಒಳಗೊಂಡು ರೆಸ್ಟೋರೆಂಟ್ ಮಾದರಿಯಾಗಬೇಕು ಎಂಬುದು `ನಮ್ಮ ವೆುಟ್ರೊ' ಅಧಿಕಾರಿಗಳ ಆಶಯ.

ರೆಸ್ಟೋರೆಂಟ್ ಸಮರ್ಪಕ ನಿರ್ವಹಣೆ ಮಾಡಬೇಕು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಲು ಮೊದಲ ಆದ್ಯತೆ ನೀಡಬೇಕು ಎಂದು ಪರವಾನಗಿ ನೀಡುವಾಗಲೇ ಷರತ್ತು ವಿಧಿಸಲಾಗುವುದು. ಅಡುಗೆ ಕೋಣೆಯಲ್ಲಿ ಆಧುನಿಕ ಸೌಕರ್ಯಗಳು ಇರಬೇಕು. ಆಹಾರ ತಯಾರಿ ಹಾಗೂ ಶುಚಿತ್ವ ಕಾರ್ಯಕ್ಕೆ ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಸೂಚಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

`ಮೆಟ್ರೊ ಪ್ರಯಾಣಿಕರಿಗೆ ತಿಂಡಿಗಳನ್ನು ಮಾರಾಟ ಮಾಡಲು ಅನುವಾಗುವಂತೆ ರೆಸ್ಟೋರೆಂಟ್ ಆರಂಭಿಸಲಾಗುತ್ತಿದೆ. ಇದರ ಅಗತ್ಯ ಇತ್ತು.

ಸ್ಥಳಾವಕಾಶದ ಕೊರತೆ ಕಾರಣದಿಂದ ಮಾಂಸಾಹಾರಿ ರೆಸ್ಟೋರೆಂಟ್ ಆರಂಭಿಸುತ್ತಿಲ್ಲ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.