ADVERTISEMENT

ನರ್ಸ್ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಬೆಂಗಳೂರು: ವೇತನ ಹೆಚ್ಚಳ ಹಾಗೂ ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಶುಶ್ರೂಷಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಎಂಟು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಕೈಬಿಟ್ಟಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಮಾರ್ಚ್ 10 ರೊಳಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

`ಗುತ್ತಿಗೆ ಶುಶ್ರೂಷಕರ ಸೇವೆಯನ್ನು ಸಕ್ರಮಗೊಳಿಸುವ ಪ್ರಸ್ತಾವವನ್ನು ಸಚಿವ ಸಂಪುಟದ ಉಪಸಮಿತಿಗೆ ಕಳುಹಿಸಲಾಗುತ್ತದೆ.

ಇತರ ರಾಜ್ಯಗಳಲ್ಲಿರುವ ಪದ್ಧತಿಯನ್ನು ಉಪಸಮಿತಿ ಪರಿಶೀಲಿಸಿ, ಅದರಂತೆ ಸಚಿವ ಸಂಪುಟಕ್ಕೆ ಸೂಕ್ತ ಶಿಫಾರಸು ಮಾಡಲಿದೆ. ನಿಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯಲಿದೆ~ ಎಂದು ಸುರೇಶ್ ಕುಮಾರ್ ಭರವಸೆ ನೀಡಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬಂದಿದ್ದ ನರ್ಸ್ ಸವಿತಾ ಮಾತನಾಡಿ `ನನ್ನ ಮಗಳು ಆರನೇ ತರಗತಿ ಓದುತ್ತಿದ್ದು, ಧರಣಿಯ ಕಾರಣ ಎಂಟು ದಿನಗಳಿಂದ ಅವಳು ಶಾಲೆಗೆ ಹೋಗಿಲ್ಲ. ನಮಗೆ ಏಳು ಸಾವಿರ ವೇತನ ನೀಡಲಾಗುತ್ತಿದೆ. ಅಷ್ಟರಲ್ಲಿ ಜೀವನ ನಡೆಸುವುದು ಸಾಧ್ಯವಾಗುತ್ತಿಲ್ಲ. ಇಂದು ಸಚಿವರು ನೀಡಿರುವ ಭರವಸೆಯಲ್ಲೂ ನಮಗೆ ನಂಬಿಕೆ ಇಲ್ಲ~ ಎಂದರು.

ಸಂಘದ ಉಪಾಧ್ಯಕ್ಷೆ ಎಸ್.ಎಲ್.ಉಷಾರಾಣಿ ಮಾತನಾಡಿ `ಗುತ್ತಿಗೆ ನೌಕರರ ಸೇವೆಗಳನ್ನು ಸಕ್ರಮಗೊಳಿಸಿದಲ್ಲಿ ಈಗ ನೀಡುತ್ತಿರುವ ವೇತನದ ಜತೆಗೆ ಭತ್ಯೆಗಳನ್ನು ನೀಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ. ಮಾರ್ಚ್ 10ರೊಳಗೆ ಪರಿಹಾರ ದೊರೆಯದಿದಲ್ಲಿ ಮರುದಿನದಿಂದಲೇ ತೀವ್ರ ಹೋರಾಟ ಆರಂಭಿಸುವುದಾಗಿ ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.