ADVERTISEMENT

ನಲಪಾಡ್ ಆರ್ಭಟಕ್ಕೆ ಪ್ರಭಾವಿಗಳ ಪುತ್ರರೂ ಮೌನ

ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಇಂಚಿಂಚೂ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ನಲಪಾಡ್ ಆರ್ಭಟಕ್ಕೆ ಪ್ರಭಾವಿಗಳ ಪುತ್ರರೂ ಮೌನ
ನಲಪಾಡ್ ಆರ್ಭಟಕ್ಕೆ ಪ್ರಭಾವಿಗಳ ಪುತ್ರರೂ ಮೌನ   

ಬೆಂಗಳೂರು: ‘ಫರ್ಜಿ ಕೆಫೆಯಲ್ಲಿ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ತನ್ನ ಸಹಚರರೊಂದಿಗೆ ಸೇರಿ ವಿದ್ವತ್ ಮೇಲೆ ಹಲ್ಲೆ ನಡೆಸುವಾಗ, ಕೆಲ ಪ್ರಭಾವಿ ರಾಜಕಾರಣಿಗಳ ಪುತ್ರರೂ ಕೆಫೆಯಲ್ಲಿದ್ದರು. ಸಿಟ್ಟಿನಲ್ಲಿದ್ದ ನಲಪಾಡ್‌ನನ್ನು ನಿಯಂತ್ರಿಸಲು ಸಾಧ್ಯವಾಗದೆ, ಅವರು ಹೊರಟು ಹೋಗಿದ್ದರು’ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಚ್‌ಶೀಟ್‌ನಲ್ಲಿದೆ.

ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಪುತ್ರ ಪಿ.ಎಂ.ರಿತಿನ್‌, ಶಾಸಕ ಮುರುಗೇಶ್‌ ನಿರಾಣಿ ಪುತ್ರ ವಿಶಾಲ್‌ ನಿರಾಣಿ, ಮಾಜಿ ಸಚಿವ ಎಂ.ಎಚ್‌.ಅಂಬರೀಷ್‌ ಪುತ್ರ ಅಭಿಷೇಕ್‌ ಮತ್ತು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಫರ್ಜಿ ಕೆಫೆಯಲ್ಲಿದ್ದರು.

‘ತುಂಬ ಸಿಟ್ಟಿನಲ್ಲಿದ್ದ ನಲಪಾಡ್ ಹಾಗೂ ಸಹಚರರು, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದನ್ನು ಮನಗಂಡು ಪ್ರಭಾವಿಗಳ ಪುತ್ರರು ಅಸಹಾಯಕರಾಗಿ ಅಲ್ಲಿಂದ ಹೊರಟು ಹೋಗಿದ್ದರು’ ಎಂದು ಚಾರ್ಜ್‌ಶೀಟ್‌ನಲ್ಲಿದೆ.

ADVERTISEMENT

ರಿತಿನ್‌ ಮತ್ತು ಅಭಿಷೇಕ್‌ ಅವರ ಹೇಳಿಕೆಗಳೂ ಅದರಲ್ಲಿದ್ದು, ಪ್ರತಿ ’ಪ್ರಜಾವಾಣಿ’ಗೆ ಲಭ್ಯವಾಗಿದೆ.

ಶಾಂಪೇನ್‌ನಿಂದ ಗಲಾಟೆ ಶುರು: ‘ನಲಪಾಡ್‌ ಹಾಗೂ ನಾನು ಬಾಲ್ಯದ ಸ್ನೇಹಿತರು. ಆತ ಶಾಂಪೇನ್ ಬಾಟಲಿ ಹಿಡಿದು, ನನ್ನ ಮುಖದ ಮೇಲೆ ಚಿಮ್ಮಿಸಲು ಬೆನ್ನಟ್ಟಿದ್ದ. ಈ ಸಂದರ್ಭದಲ್ಲಿ ನಲಪಾಡ್‌ನ ಕಾಲು, ಅಲ್ಲಿಯೇ ಕುಳಿತಿದ್ದ ವಿದ್ವತ್‌ನ ಕಾಲಿಗೆ ಬಡಿಯಿತು’ ಎಂದು ರಿತಿನ್ ಪೊಲೀಸರಿಗೆ ತಿಳಿಸಿದ್ದಾರೆ.

ಆಗ ವಿದ್ವತ್, ‘ಸ್ವಲ್ಪ ನೋಡಿಕೊಂಡು ಓಡಾಡಿ’ ಎಂದರು. ಇದನ್ನು ಅವಮಾನವೆಂದು ಭಾವಿಸಿದ ನಲಪಾಡ್‌, ‘ನಾನು ಯಾರು ಗೊತ್ತ? ಎಂಎಲ್‌ಎ ಮಗ. ನನಗೇ ಎದುರು ಮಾತನಾಡುತ್ತೀಯಾ. ಕ್ಷಮೆ ಕೇಳು. ನನ್ನ ಬೂಟನ್ನು ನೆಕ್ಕು’ ಎಂದ. ಅದಕ್ಕೆ ವಿದ್ವತ್ ನಿರಾಕರಿಸಿದಾಗ ನಲಪಾಡ್ ಹಲ್ಲೆ ನಡೆಸಿದ. ಬಳಿಕ ಆತನ ಸಹಚರರೂ ಬಂದು ಥಳಿಸಿದ್ದರು.

‘ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ನಾನು ಮತ್ತು ಅಭಿಷೇಕ್‌ ಮನವಿ ಮಾಡಿದೆವು. ನಮ್ಮ ಮಾತನ್ನು ನಲಪಾಡ್ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಆಗ ಹೊರಗೆ ಹೋಗಿ, ಐದು ನಿಮಿಷದ ಬಳಿಕ ಕೆಫೆಗೆ ಮರಳಿದೆ. ವಿದ್ವತ್‌ ಅವರನ್ನು ಬಿಡುವಂತೆ ಮತ್ತೆ ಮನವಿ ಮಾಡಿದೆ. ಎಷ್ಟೇ ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ’ ಎಂದು ರಿತಿನ್ ಹೇಳಿದ್ದಾರೆ.

‘ನಾನು ವಿದ್ವತ್ ರಕ್ಷಣೆಗೆ ಮುಂದಾದಾಗ,  ‘ಇದು ನಿನಗೆ ಸಂಬಂಧಿಸಿದ ವಿಷಯವಲ್ಲ, ಮಧ್ಯ ಪ್ರವೇಶಿಸಬೇಡ’ ಎಂದು ನಲಪಾಡ್ ಹೇಳಿದರು’ ಎಂದು ಅಭಿಷೇಕ್ ಹೇಳಿಕೆ ಕೊಟ್ಟಿದ್ದಾರೆ. ವಿಶಾಲ್‌ ನಿರಾಣಿ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿಲ್ಲ.
*
ನನ್ನನ್ನು ಸಾಯಿಸಿ ಎನ್ನುತ್ತಿದ್ದ: ವಿದ್ವತ್‌
‘ನಾನು ಕ್ಷಮೆ ಕೇಳಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ನಲಪಾಡ್‌ ನನ್ನ ಕೆನ್ನೆಗೆ ಅನೇಕ ಬಾರಿ ಹೊಡೆದ. ನಂತರ ನನ್ನನ್ನು ಹೊಡೆದು ಸಾಯಿಸುವಂತೆ ತನ್ನ ಸಹಚರರಿಗೆ ಹೇಳಿದ. ಆಗ ಎಲ್ಲರೂ ಒಟ್ಟಾಗಿ ನನ್ನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದರು. ನಕಲ್‌ ರಿಂಗ್‌ನಿಂದ ಮುಖಕ್ಕೆ ಗುದ್ದಿದರು. ಬಾಟಲಿಯಿಂದ ಹೊಡೆದಿದ್ದಲ್ಲದೆ, ಐಸ್ ಬಕೆಟನ್ನು ಮೈಮೇಲೆ ಎಸೆದರು’ ಎಂದು ವಿದ್ವತ್‌ ಹೇಳಿಕೆ ನೀಡಿದ್ದಾರೆ.

‘ನಂತರ ಅವನನ್ನು ಜೀವ ಸಹಿತ ಬಿಡಬೇಡಿ, ಕೊಂದು ಹಾಕಿ. ಹಲ್ಲೆ ನಿಲ್ಲಿಸಿ ಎಂದು ಕೆಫೆಯಲ್ಲಿದ್ದ ನನ್ನ ಸ್ನೇಹಿತರು ಮತ್ತು ಬೌನ್ಸರ್‌ಗಳು ಮನವಿ ಮಾಡುತ್ತಿದ್ದರೂ ಅವರಿಗೆ ದೂರ ಹೋಗುವಂತೆ ನಲಪಾಡ್‌ ಹೇಳುತ್ತಿದ್ದ’ ಎಂದು ವಿದ್ವತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.