ADVERTISEMENT

ನಾಟಕಗಳ ಮರುವ್ಯಾಖ್ಯಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 18:30 IST
Last Updated 9 ಜುಲೈ 2012, 18:30 IST

ಬೆಂಗಳೂರು: `ಎಪ್ಪತ್ತರ ದಶಕದಲ್ಲಿ  ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಅಣಕಿಸುವ ಅಸ್ತ್ರವಾಗಿ ನಾಟಕಗಳು ಬಳಕೆಯಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಈ ಅಸ್ತ್ರ ಪ್ರಖರತೆಯನ್ನು ಕಳೆದುಕೊಂಡಿದ್ದು, ಮರುವ್ಯಾಖ್ಯಾನ ಮಾಡುವ ಅಗತ್ಯವಿದೆ~ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸುರೇಶ್ ಆನಗಳ್ಳಿ ಅಭಿಪ್ರಾಯಪಟ್ಟರು.

ಪಂಚಮುಖಿ ನಟರ ಸಮೂಹವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾದಲ್ ಸರ್ಕಾರ್ ನೆನಪಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಒಳ್ಳೆಯ ಕಲೆ ಮತ್ತು ಕೆಟ್ಟ ಕಲೆ ಎಂಬ ಎರಡು ಬಗೆಯ ಕಲೆಗಳಿದ್ದು, ವ್ಯವಸ್ಥೆಯನ್ನು ವಿನಾಕಾರಣ ಹೊಗಳುತ್ತಲೇ ಇರುವುದು ಕೆಟ್ಟ ಕಲೆ. ನಾಟಕಗಳನ್ನು ನಿರ್ದೇಶಿಸುವವರ ಸಂಖ್ಯೆ ಹೆಚ್ಚಿದ್ದರೂ, ಸಾಮಾಜಿಕ ಸೂಕ್ಷ್ಮಗಳನ್ನು ಆಧರಿಸಿ ನಾಟಕ ರಚಿಸುವಲ್ಲಿ ಎಡವುತ್ತಿರುವುದು ರಂಗಭೂಮಿಯ ದುರಂತ~ ಎಂದು ವಿಶ್ಲೇಷಿಸಿದರು.

`ರಂಗಭೂಮಿಯು ಸಮರ್ಪಕ ಮಾರ್ಗದರ್ಶಕರಿಲ್ಲದೇ ಸೊರಗುತ್ತಿದೆ. ಇತರೆ ಮಾಧ್ಯಮಗಳಂತೆ ರಂಗಭೂಮಿಯು ಯಾವುದೇ ವಿದ್ಯಮಾನಗಳಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸದೇ ಹೋದರೂ, ಅದು ಮನುಷ್ಯನ ಆಳದಲ್ಲಿ ಒಂದು ಬಗೆಯ ಚಳವಳಿಯನ್ನು ಹುಟ್ಟುಹಾಕುತ್ತದೆ~ ಎಂದು ಹೇಳಿದರು.

ರಂಗನಿರ್ದೇಶಕ ಪ್ರಮೋದ್ ಶಿಗ್ಗಾಂವ್, `ನಟ, ನಿರ್ದೇಶಕರಿಂದ ಹಿಡಿದು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಿರುವವರ ಬಹುತೇಕರಲ್ಲಿ ಬದ್ಧತೆಯ ಕೊರತೆ ಎದ್ದುಕಾಣುತ್ತಿದೆ. ರಂಗಭೂಮಿಯ ಕುರಿತ ಆಳವಾದ ಅಧ್ಯಯನದಿಂದ ಹೊಸ ಬಗೆಯ ರಂಗಶಿಸ್ತನ್ನು ರೂಢಿಸಿಕೊಳ್ಳುವ ಅಗತ್ಯವಿದೆ~ ಎಂದು ಹೇಳಿದರು. 

 `ಉಪ್ಪಿಟ್ಟು ಹೇಗೆ ತಯಾರಿಸುವುದು ಎಂಬಂತಹ ವಿಚಾರಗಳ ಕುರಿತು ನಾಟಕಗಳು ರಚನೆಯಾಗುತ್ತಿವೆ. ನಾಟಕದಲ್ಲಿದ್ದ ಕಾಂತ್ರಿಯ ವಿಚಾರಗಳು ಮರೆಯಾಗಿ, ನಾಟಕ ರಚಿಸಿ, ನಿರ್ದೇಶಿಸುವ ಪ್ರಕ್ರಿಯೆ ಒಂದು ಕ್ರಾಂತಿಯಂತಾಗಿದೆ. ಈ ಬಗ್ಗೆಯೂ ಹೆಚ್ಚಿನ ಚರ್ಚೆ ನಡೆಯಬೇಕು~ ಎಂದು ತಿಳಿಸಿದರು. ಡಾ.ವಿಜಯಮ್ಮ, ರಾಮನಾಥ್, ಜೋಸೆಫ್, ಕೆ.ವಿ.ನಾಗರಾಜಮೂರ್ತಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.